ಪ್ಲಾಸ್ಟಿಕ್ ಮಾಧ್ಯಮಗಳಿಂದ ಪ್ಲಾಸ್ಟಿಕ್ ಸುದ್ದಿಗಳು!

Update: 2017-06-11 18:50 GMT

ದೈನಂದಿನ ಬದುಕಿಗೆ ಸಂಬಂಧಪಟ್ಟ ಸುದ್ದಿಗಳನ್ನು ಅತಿರಂಜಿತವಾಗಿ ಪ್ರಕಟಿಸುವ ಪತ್ರಿಕೆಗಳಿಗೆ ‘ಪೀತ ಪತ್ರಿಕೆ’ ಎಂದು ಕರೆದು ಮುಖ್ಯವಾಹಿನಿಯಿಂದ ದೂರವಿಡುವ ಪದ್ಧತಿಯಿತ್ತು. ಸುದ್ದಿಗಳ ಹೆಸರಲ್ಲಿ ಬ್ಲ್ಯಾಕ್‌ಮೇಲ್ ಮಾಡುವುದು, ಅತಿ ರಂಜಿತವಾದ ವದಂತಿಗಳನ್ನು ಹರಡುವುದು, ಸಮಾಜದ ಸ್ವಾಸ್ಥವನ್ನು ಕೆಡಿಸುವುದು ಇವುಗಳ ಗುಣಗಳಾಗಿದ್ದವು ಮತ್ತು ಇಂತಹ ಪತ್ರಿಕೆಗಳನ್ನು ಓದುವ ವರ್ಗವನ್ನು ಕೀಳಭಿರುಚಿಯ ಓದುಗರು ಎಂದು ದೂರವಿಡಲಾಗುತ್ತಿತ್ತು. ಆ ಅಭಿರುಚಿಗಳಿಗೆ ಸಮಾಜದಲ್ಲಿ ಗೌರವವಿದ್ದಿರಲಿಲ್ಲ.

ಯಾವಾಗ ಸಂಜೆ ಪತ್ರಿಕೆಗಳು ಕಾಲಿಟ್ಟವೋ, ಆಗ ಬೆಳಗಿನ ಪತ್ರಿಕೆಗಳಿಗಿಂತ ಭಿನ್ನವಾಗುವ ಮತ್ತು ಬೇಗನೇ ಸುದ್ದಿ ನೀಡುವ ಅಗತ್ಯವೊಂದು ಅವುಗಳಿಗೆ ಎದುರಾಯಿತು. ಆಗ ದೈನಂದಿನ ಕ್ರೈಂ ಅಥವಾ ಅಪರಾಧ ಸುದ್ದಿಗಳನ್ನೇ ವೈಭವೀಕರಿಸಿ ಮುಖಪುಟದಲ್ಲಿ ನೀಡುವುದು ಇವುಗಳಿಗೆ ಅನಿವಾರ್ಯವಾಯಿತು. ಆದರೂ ಸಂಜೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಜನರು ಗಂಭೀರವಾಗಿ ಸ್ವೀಕರಿಸಿದ್ದು ಕಡಿಮೆ. ಮುಖ್ಯವಾಗಿ, ಸಂಜೆ ಪತ್ರಿಕೆಗಳ ಓದುಗರ ಸಂಖ್ಯೆಗೇ ಒಂದು ಮಿತಿಯಿತ್ತು. ಯಾವಾಗ ಟಿವಿಗಳು ಮನೆಮನೆಗೆ ಕಾಲಿಟ್ಟವೋ, ಅಲ್ಲಿಂದ ಸುದ್ದಿಗಳಿಗೆ ಬೇರೆ ಕೆಲವು ಜವಾಬ್ದಾರಿಗಳು ಬಿದ್ದವು.

ಒಂದು ಕಾಲದಲ್ಲಿ ವರದಿಗಳು, ಸುದ್ದಿಗಳು ದೈನಂದಿನ ಮಾಹಿತಿಗಳನ್ನು ನೀಡುತ್ತಿದ್ದರೆ, ಟಿವಿಗಳು ಸುದ್ದಿಗಳನ್ನೂ ಮನರಂಜನೆಯ ಭಾಗವಾಗಿಸಿದವು. ಸುದ್ದಿಗಳನ್ನು ಅತಿರಂಜಿತವಾಗಿ ನೀಡುವುದು, ಸೆನ್ಸೇಶನಲ್ ಸುದ್ದಿಗಳನ್ನು ನೀಡುವುದರಲ್ಲಿ ಪೈಪೋಟಿಗಳು ಶುರುವಾದವು. ಜನರೂ ಇಂತಹ ಸುದ್ದಿಗಳಿಗೆ ಅದೆಷ್ಟು ಒಗ್ಗಿ ಹೋದರು ಎಂದರೆ, ಸುದ್ದಿಗಳನ್ನು ಹಿನ್ನೆಲೆ ಸಂಗೀತದ ಜೊತೆಗೇ ಅನುಭವಿಸುವಂತಹ ಮಾನಸಿಕತೆಗೆ ಬಂದು ತಲುಪಿದ್ದಾರೆ. ಸಿನೆಮಾಗಳಲ್ಲಿ ಹಾರರ್, ದುರಂತಗಳು ಇರುವಂತೆ, ಸುದ್ದಿಗಳು ಸ್ಕ್ರಿಪ್ಟ್‌ಗಳಾಗಿ ಪರಿವರ್ತನೆಯಾದವು.

ತಾನು ಪ್ರಸಾರ ಮಾಡುವ ಸುದ್ದಿಗಳಲ್ಲಿ ಸತ್ಯ ಎಷ್ಟಿದೆ ಎನ್ನುವುದಕ್ಕಿಂತ ಜನರನ್ನು ಸೆಳೆಯುವ ಶಕ್ತಿ ಅದಕ್ಕೆಷ್ಟಿದೆ ಎನ್ನುವುದಷ್ಟಕ್ಕೇ ಬದ್ಧವಾಗಿರುವ ಪತ್ರಕರ್ತರ ಒಂದು ಹೊಸ ಪೀಳಿಗೆ ಹುಟ್ಟಿದ್ದು ಹೀಗೆ. ಇಂತಹ ಪತ್ರಕರ್ತರೇ, ತಮ್ಮ ಟಿವಿ ಚಾನೆಲ್‌ಗಳ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿಗಳನ್ನು ಬೆಳೆದು, ಪ್ಲಾಸ್ಟಿಕ್ ಮೊಟ್ಟೆಗಳನ್ನಿಟ್ಟು ಮಾರಿ ಜನರನ್ನು ಆತಂಕದಲ್ಲಿ ಕೆಡವಿದವರು. ಅಂತಹದೊಂದು ವದಂತಿಗಳನ್ನು ಹರಡಿದ ಟಿವಿ ಚಾನೆಲ್‌ಗಳೇ ಬಳಿಕ, ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆಗಳಿಲ್ಲ ಎಂದು ವರದಿ ಮಾಡುವ ಮೂಲಕ ಜನರನ್ನು ಇದೀಗ ಜನರನ್ನು ಸಮಾಧಾನಿಸುತ್ತಿದೆ.

ಹಾಗೆಂದು ಇಂತಹ ಸುದ್ದಿಗಳನ್ನು ಮಾಧ್ಯಮಗಳೇ ತಮ್ಮ ಕೊಠಡಿಯಲ್ಲಿ ಕೂತು ತಯಾರಿಸುತ್ತದೆ ಎಂದಲ್ಲ. ಸುದ್ದಿ ಚಾನೆಲ್‌ಗಳ ಸೆನ್ಸೇಶನಲ್ ಸುದ್ದಿಗಳ ಹಸಿವೆಯನ್ನು ಸ್ಥಾಪಿತ ಹಿತಾಸಕ್ತಿಗಳು ದುರುಪಯೋಗ ಪಡಿಸಿಕೊಳ್ಳಲು, ಲಾಭ ಮಾಡಿಕೊಳ್ಳಲು ಕಾದು ಕುಳಿತಿರುತ್ತವೆ. ರಾಜಕೀಯ ಪಕ್ಷಗಳಿಗೂ ಇಂತಹ ಸುದ್ದಿಯ ವೈಭವೀಕರಣಗಳೇ ಅತ್ಯಗತ್ಯವಾಗುತ್ತವೆ. ನಂದಿತಾ ಎನ್ನುವ ವಿದ್ಯಾರ್ಥಿನಿಯ ಆತ್ಮಹತ್ಯೆ, ‘ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ’ಯಾಗಿ ಪರಿವರ್ತನೆಯಾದುದು ಇಂತಹದೇ ಪಿತೂರಿಗಾರರಿಂದ. ಸಂಘಪರಿವಾರಕ್ಕೆ ಶಿವಮೊಗ್ಗಕ್ಕೆ ಬೆಂಕಿ ಹಚ್ಚುವುದು ಬೇಕಾಗಿತ್ತು. ಮಾಧ್ಯಮಗಳಿಗೆ ಅವಸರವಸರವಾಗಿ ಒಂದು ರುದ್ರ ರೋಚಕ ಸುದ್ದಿ ಬೇಕಾಗಿತ್ತು.

ಇದೊಂದು ರೀತಿಯಲ್ಲಿ, ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎನ್ನುವ ಗಾದೆಯಂತಿದೆ. ಪರಿಣಾಮವಾಗಿ ಎಲ್ಲ ಪತ್ರಿಕೆಗಳಲ್ಲ್ಲಿ, ಚಾನೆಲ್‌ಗಳಲ್ಲೂ ವದಂತಿಗಳೇ ಸುದ್ದಿ ರೂಪ ಪಡೆದು ಪ್ರಸಾರವಾಯಿತು. ಸತ್ಯಾಸತ್ಯತೆ ಬದಿಗೆ ಸರಿಯಿತು. ತೀರ್ಥಹಳ್ಳಿಯ ಜನರು ಆತಂಕಕ್ಕೊಳಗಾದರು. ಅಮಾಯಕರ ಅಂಗಡಿಗಳಿಗೆ ಬೆಂಕಿ ಬಿತ್ತು. ನೂರಾರು ಜನರು ಜೈಲು ಸೇರಿದರು. ಇದೆಲ್ಲ ನಡೆದು ಎಷ್ಟೋ ತಿಂಗಳ ಬಳಿಕ, ಅದೇ ಮಾಧ್ಯಮಗಳಲ್ಲಿ ಸಣ್ಣದಾಗಿ, ನಂದಿತಾ ಸಾವು ಕೊಲೆಯಲ್ಲ, ಆತ್ಮಹತ್ಯೆ ಎಂದು ಪ್ರಕಟವಾಯಿತು. ಆದರೆ ಈ ಸತ್ಯದ ಬಗ್ಗೆ ಜನರು ಅದಾಗಲೇ ಆಸಕ್ತಿಯನ್ನು ಕಳೆದುಕೊಂಡು ಬಿಟ್ಟಿದ್ದರು. ತಾವು ಮಾಡಿದ ತಪ್ಪಿಗೆ ಕನಿಷ್ಠ ಸ್ಪಷ್ಟೀಕರಣ, ವಿಷಾದ ಸೂಚಿಸುವ ಹೊಣೆಗಾರಿಕೆಯೂ ತಮಗಿಲ್ಲ ಎಂದು ಮಾಧ್ಯಮಗಳು ಭಾವಿಸಿಕೊಂಡವು. ಅಷ್ಟೇ ಅಲ್ಲ, ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳಿಂದ ವಿಷಾದವನ್ನು ನಿರೀಕ್ಷಿಸುವುದು ತಮ್ಮ ಅಗತ್ಯವಲ್ಲ ಎಂಬಂತೆ ವೀಕ್ಷಕರು, ಓದುಗರು ತಮ್ಮ ಚಾನೆಲ್‌ಗಳನ್ನು, ಪುಟಗಳನ್ನು ನಿರ್ಲಿಪ್ತರಂತೆ ಬದಲಿಸಿದರು.

ನಕಲಿ ಅಕ್ಕಿಯ ಕುರಿತಂತೆ ಒಂದು ವರ್ಷದಿಂದ ವದಂತಿಗಳು ಹರಿದಾಡುತ್ತಿವೆ. ಮತ್ತು ಇವು ಮಾಧ್ಯಮಗಳು ಸೃಷ್ಟಿಸಿದ ವದಂತಿಗಳೆಂದು ಎಂದು ಪಕ್ಕಕ್ಕೆ ತಳ್ಳುವಂತಿಲ್ಲ. ಈ ವದಂತಿಯನ್ನು ವ್ಯವಸ್ಥಿತವಾಗಿ ಹರಡಲಾಗಿದೆ. ಕೆಲವು ಕಾರ್ಪೊರೇಟ್ ಸಂಸ್ಥೆಗಳೂ ಇವುಗಳ ಹಿಂದಿವೆ. ಹಾಗೆಯೇ ಚೀನಾದ ವಿರುದ್ಧ ಭಾರತೀಯರಲ್ಲಿ ಅಸಹನೆಯನ್ನು ಹೆಚ್ಚಿಸುವುದಕ್ಕಾಗಿ ಸಂಘಪರಿವಾರ ಸಂಘಟನೆಗಳ ವಕ್ತಾರರು ಹರಡಿರುವ ವದಂತಿಗಳೆಂದು ಇವನ್ನು ಭಾವಿಸಲಾಗಿದೆ. ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ ಬರುತ್ತಿದೆ ಎಚ್ಚರ, ಚೀನಾದಿಂದ ಪ್ಲಾಸ್ಟಿಕ್ ತರಕಾರಿ ಬರುತ್ತಿದೆ... ಎನ್ನುವ ವದಂತಿಗಳನ್ನು ಒಂದು ವ್ಯವಸ್ಥಿತ ತಂತ್ರವಾಗಿ ದೇಶಾದ್ಯಂತ ಹರಡಲಾಗಿತ್ತು.

ಚೀನಾದ ಆಹಾರ ಪದಾರ್ಥಗಳ ವಿರುದ್ಧ ನಡೆದಿರುವ ಅನೈತಿಕ ಚಳವಳಿಯ ಭಾಗವೆಂದೇ ಇದನ್ನು ಭಾವಿಸಲಾಗಿತ್ತು. ಇಂತಹ ವದಂತಿಗಳನ್ನು ಹರಡುವಲ್ಲಿ ರಾಮ್‌ದೇವ್ ಅವರ ವಕ್ತಾರರೂ ಕೆಲಸ ಮಾಡಿದ್ದಾರೆ ಎಂಬ ಶಂಕೆಗಳಿವೆ. ಆದರೆ ಪತ್ರಕರ್ತರು ಪತ್ರಿಕಾಧರ್ಮವನ್ನು ಪಾಲಿಸಿದ್ದೇ ಆಗಿದ್ದರೆ, ಯಾವ ಹಿತಾಸಕ್ತಿಗಳ ಸಂಚೂ ಕಾರ್ಯರೂಪಕ್ಕೆ ಬರುತ್ತಿರಲಿಲ್ಲ. ವದಂತಿಗಳನ್ನು ಹರಡಿದ ಬಳಿಕ, ವಿಜ್ಞಾನಿಗಳನ್ನು ಸಂಪರ್ಕಿಸುವ ಬದಲು, ಮೊದಲೇ ತಜ್ಞರನ್ನು ಸಂಪರ್ಕಿಸಿ ವರದಿ ಮಾಡಿದ್ದೇ ಆಗಿದ್ದರೆ ಜನರು ಗೊಂದಲ ಬೀಳುತ್ತಿರಲಿಲ್ಲ.

ಸಿದ್ದರಾಮಯ್ಯ ಶ್ರೀಸಾಮಾನ್ಯನಿಗೆ ‘ಅಕ್ಕಿ ಭಾಗ್ಯ’ ಒದಗಿಸಿದಾಗಲೂ ಇಂತಹ ವದಂತಿಗಳನ್ನು ಮಾಧ್ಯಮಗಳು ತೇಲಿ ಬಿಟ್ಟಿದ್ದವು. ಬಿಸಿಯೂಟವನ್ನು ಶಾಲೆಗಳಲ್ಲಿ ಘೋಷಿಸಿದಾಗ ಅದನ್ನು ವಿಫಲಗೊಳಿಸುವ ಭಾಗವಾಗಿಯೂ ಮಾಧ್ಯಮಗಳು ಸಾಕಷ್ಟು ವದಂತಿಗಳನ್ನು ಹರಿಯಬಿಟ್ಟಿದ್ದವು. ಹೊಸ ಎರಡು ಸಾವಿರ ರೂಪಾಯಿಯ ನೋಟು ಬಂದಾಗ ಟಿವಿ ಚಾನೆಲ್‌ನ ಮುಖ್ಯಸ್ಥರೇ ‘‘ನೋಟಿನಲ್ಲಿ ಚಿಪ್ ಇದೆ’’ ಎಂದು ಎದೆಯುಬ್ಬಿಸಿ ಘೋಷಿಸಿರುವುದನ್ನು ನಾವು ಕಂಡಿದ್ದೇವೆ ಮತ್ತು ಆ ಕಾರಣಕ್ಕಾಗಿ ಅವರು ಇಂದಿಗೂ ಜನರ ನಡುವೆ ಹಾಸ್ಯದ ವಸ್ತುವಾಗಿ ಉಳಿದಿದ್ದಾರೆ. ಪಾಕಿಸ್ತಾನದಿಂದ ಉಗ್ರರು ಬರುತ್ತಿದ್ದಾರೆ, ಕಂಟೈನರ್‌ಗಳಲ್ಲಿ ರಾಶಿ ರಾಶಿ ಖೋಟಾ ನೋಟುಗಳು ಬರುತ್ತಿವೆ ಎಂದು ಊಹಾಪೋಹಗಳನ್ನೇ ಗಂಟೆಗಟ್ಟಲೆ ಟಿವಿಗಳಲ್ಲಿ ವಾಚಿಸುವುದು, ದೇವಸ್ಥಾನಗಳಿಗೆ ಉಗ್ರರ ಬೆದರಿಕೆ ಎಂದು ಜನರನ್ನು ಆತಂಕಕ್ಕೀಡು ಮಾಡುವುದು ಇವೆಲ್ಲವೂ ಪ್ಲಾಸ್ಟಿಕ್ ಮಾಧ್ಯಮಗಳ ಪ್ಲಾಸ್ಟಿಕ್ ಸುದ್ದಿಗಳೇ ಆಗಿವೆ.

ಇಂದು ನಾವು ಆತಂಕ ಪಡಬೇಕಾದುದು ಪ್ಲಾಸ್ಟಿಕ್ ಅಕ್ಕಿಗಳಿಗೋ ಮೊಟ್ಟೆಗಳಿಗೋ ಅಲ್ಲ. ಅವನ್ನು ಬೇಯಿಸಿದಾಗ ಅದರ ಬಣ್ಣ ಹೊರ ಬರುತ್ತದೆ. ಆದರೆ ಪತ್ರಕರ್ತರ ವೇಷದಲ್ಲಿರುವ ಕೆಲವು ಪ್ಲಾಸ್ಟಿಕ್‌ಗಳು ಸಮಾಜದ ನಡುವೆ ತೂರಿ ಬಿಡುತ್ತಿರುವ ಪ್ಲಾಸ್ಟಿಕ್‌ಸುದ್ದಿಗಳ ಅಸಲಿ-ನಕಲಿತನಗಳನ್ನು ಗುರುತಿಸುವುದು ಅಷ್ಟು ಸುಲಭವಿಲ್ಲ. ಮತ್ತು ಇಂದು ಓದುಗರು ಮತ್ತು ಪ್ರೇಕ್ಷಕರು ತಾಜಾ ಹೂವುಗಳಿಗಿಂತ ಪ್ಲಾಸ್ಟಿಕ್ ಹೂಗಳ ಬಣ್ಣಗಳಿಗೆ ಬಲಿ ಬೀಳುವುದೂ ಪರೋಕ್ಷವಾಗಿ ಪ್ಲಾಸ್ಟಿಕ್ ಸುದ್ದಿಗಳ ಹೆಚ್ಚಳಕ್ಕೆ ಕಾರಣವಾಗಿರಬಹುದು. ನಾವು ನಮ್ಮ ಅಭಿರುಚಿಗಳನ್ನು ಬದಲಿಸಿಕೊಂಡರಷ್ಟೇ ಈ ಪ್ಲಾಸ್ಟಿಕ್ ‘ಮಾಧ್ಯಮಗಳು’ ಪ್ಲಾಸ್ಟಿಕ್ ಮೊಟ್ಟೆಗಳನ್ನಿಟ್ಟು ಮರಿಮಾಡುವ ಚಾಳಿಯನ್ನು ನಿಲ್ಲಿಸಬಹುದೇನೋ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News