ಕಳವು ಪ್ರಕರಣ: ಆರೋಪಿಗಳ ಸೆರೆ
ಸಾಗರ, ಜೂ. 12: ಇತ್ತೀಚಿನ ದಿನಗಳಲ್ಲಿ ನಡೆದ ಮನೆ ಕಳ್ಳತನಕ್ಕೆ ಸಂಬಂಧಪಟ್ಟಂತೆ ನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಸುಮಾರು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಜೂ. 7ರಂದು ಆಟೋ ರಿಕ್ಷಾವೊಂದರಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಆರೋಪಿಗಳಾದ ಉಮೇಶ್ ಬಿನ್ ಬುಡ್ಡಾ ಅರಮನೆಕೇರಿ, ರಾಜು ಯಾನೆ ಡೊಣಕರಾಜ ಜೆ.ಪಿ.ನಗರ, ಮಹ್ಮದ್ ಸುಲ್ತಾನ್ ಯಾನೆ ಟಿಪ್ಪು ಸುಲ್ತಾನ್ ಅರಮನೆ ಕೇರಿ, ಮಹ್ಮದ್ ಫಾರೂಕ್ ಯಾನೆ ವಸೀಂ ಅರಮನೆ ಕೇರಿ, ಸೈಯದ್ ಇರ್ಫಾನ್ ಯಾನೆ ಸೈಯದ್ ಇಮಾಮ್ ಕೆಳದಿ ರಸ್ತೆ ಇವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಸಾಗರ ಉಪವಿಭಾಗ ವ್ಯಾಪ್ತಿಯಲ್ಲಿ 13 ಹಾಗೂ ತೀರ್ಥಹಳ್ಳಿ ಠಾಣಾ ವ್ಯಾಪ್ತಿಯಲ್ಲಿ 1 ಕಳ್ಳತನ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ 380 ಗ್ರಾಂ ಚಿನ್ನಾಭರಣ, 10 ಕೆ.ಜಿ. ಬೆಳ್ಳಿ, 2 ಮೊಬೈಲ್, 1 ವಾಚ್ ಹಾಗೂ ಕೃತ್ಯಕ್ಕೆ ಬಳಸಿದ್ದ 1 ಆಟೋ ರಿಕ್ಷಾ ಸೇರಿದಂತೆ ಸುಮಾರು 15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.