×
Ad

ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ

Update: 2017-06-13 16:11 IST

ಸಾಗರ,ಜೂ.13 : ಗುತ್ತಿಗೆ ಪೌರ ಕಾರ್ಮಿಕರ ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಿ, ಸೇವೆಯನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ನಗರಸಭೆ ಪೌರ ಕಾರ್ಮಿಕ ದಿನಗೂಲಿ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಕೆಲಸವನ್ನು ಸ್ಥಗಿತಗೊಳಿಸಿ ನಗರಸಭೆ ಎದುರು ಪ್ರತಿಭಟನೆ ನಡೆಸಿ, ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಾಗರಾಜ ಸ್ವಾಮಿ, ಗುತ್ತಿಗೆ ಪೌರ ಕಾರ್ಮಿಕರು ತಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಬೀದಿಗಿಳಿಯುವ ಸ್ಥಿತಿಯನ್ನು ರಾಜ್ಯ ಸರಕಾರ ಮಾಡಿದೆ. ಇದು ಸರಕಾರಕ್ಕೆ ಶೋಭೆ ತರುವಂತಹದ್ದಲ್ಲ. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ 45ಸಾವಿರಕ್ಕೂ ಹೆಚ್ಚು ಗುತ್ತಿಗೆ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆಲ್ಲಾ ಸೂಕ್ತ ಮೂಲಭೂತ ಸೌಲಭ್ಯ, ಜೀವನ ಭದ್ರತೆ ಇಲ್ಲವಾಗಿದೆ. ಸರಕಾರ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸಿದರೆ ನಾವು ಸಲ್ಲಿಸುವ ಸೇವೆಗೆ ಕಿಂಚಿತ್ ಗೌರವ ಸಿಕ್ಕಿದಂತೆ ಆಗುತ್ತದೆ ಎಂದು ಹೇಳಿದರು.

ಕಾರ್ಮಿಕ ಕಾಯ್ದೆಯಂತೆ ಸರಕಾರ ನಡೆದುಕೊಳ್ಳಬೇಕು. ಕಾರ್ಮಿಕ ಕಾಯ್ದೆಯಲ್ಲಿ ಗುತ್ತಿಗೆ ನಿಯಂತ್ರಣ ಮತ್ತು ರದ್ದತಿ 10ಎ 1970ರ ಪ್ರಕಾರ ದಿನನಿತ್ಯ ಮಾಡುವ ಕೆಲಸವನ್ನು ಗುತ್ತಿಗೆ ನೀಡಬಾರದು ಎಂಬ ಉಲ್ಲೇಖವಿದೆ. ಸಂವಿಧಾನ ಬದ್ದವಾಗಿ ಗುತ್ತಿಗೆ ಪೌರಕಾರ್ಮಿಕರಿಗೂ ಬದುಕುವ ಹಕ್ಕು ಇದೆ. ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯ ಪಡೆಯಲು ನಮಗೂ ಅವಕಾಶವಿದೆ ಎಂದು ತಿಳಿಸಿದರು.

ಸರಕಾರ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪೌರ ಕಾರ್ಮಿಕರಾಗಿ ಕೆಲಸ ಮಾಡುವ ನೀರು ಸರಬರಾಜು ಗುತ್ತಿಗೆ ಕಾರ್ಮಿಕರು, ಶೌಚಾಲಯ ಗುತ್ತಿಗೆ ಕಾರ್ಮಿಕರು, ಡ್ರೈವರ್, ಆಟೋ ಟಿಪ್ಪರ್ ಡ್ರೈವರ್, ಕಂಪ್ಯೂಟರ್ ಆಪರೇಟರ್, ಸ್ವಚ್ಚತಾ ಕಾರ್ಯ ನಡೆಸುತ್ತಿರುವವರನ್ನು ಖಾಯಂಗೊಳಿಸಬೇಕು. ಉಚ್ಛ ನ್ಯಾಯಾಲಯದ ನ್ಯಾಯಧೀಶರಾದ ಕೆ.ಎಲ್.ಮಂಜುನಾಥ್ ಮತ್ತು ಮಳಿಮಠ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸುವಂತೆ ನೀಡಿರುವ ತೀರ್ಪನ್ನು ರಾಜ್ಯ ಸರಕಾರ ಮಾನ್ಯ ಮಾಡಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆ ಪೌರ ಕಾರ್ಮಿಕರ ಹೋರಾಟಕ್ಕೆ ಸರಕಾರ ಸ್ಪಂದಿಸಿದ್ದು, ಜೂ. 22ರವರೆಗೆ ಬೇಡಿಕೆ ಈಡೇರಿಕೆಗೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಗಡವು ಕೇಳಿದ್ದಾರೆ. ಅಲ್ಲಿಯವರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗುತ್ತಿದೆ. ಒಂದೊಮ್ಮೆ ಸರಕಾರ ಬೇಡಿಕೆ ಈಡೇರಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ನಾಗರಾಜ ಎಂ., ಕಾರ್ಯದರ್ಶಿ ರಾಘವೇಂದ್ರ ಆರ್., ಖಜಾಂಚಿ ಮುರುಗೇಶ್, ಪ್ರಮುಖರಾದ ರಾಜೇಂದ್ರ, ಕುಪ್ಪ, ನಟರಾಜ, ಮೂರ್ತಿ, ಕಣ್ಣನ್, ಚೆಲುವಿ, ಪ್ರಕಾಶ್, ಮಂಜುಳಾ, ಲಕ್ಷ್ಮೀ, ಪಳನಿಯಮ್ಮ, ದೇವಿಕಾ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News