×
Ad

ಮಂಡಳಿಯೊಳಗೆ ಮೊದಲು ಸುಧಾರಣೆ ಆಗಬೇಕು: ಹೆಚ್.ಎನ್. ರಮೇಶ್

Update: 2017-06-13 16:49 IST

ಹಾಸನ, ಜೂ.13: ಕಾರ್ಮಿಕ ಮಂಡಳಿಯೊಳಗೆ ಅನೇಕ ಸುಧಾರಣೆ ಆಗಬೇಕಾಗಿದ್ದು, ನಾನು ಕೂಡ ಪೂರ್ಣವಾಗಿ ಕಾರ್ಮಿಕ ಇಲಾಖೆಯ ಅಧಿಕಾರಿ ಆಗಿರುವುದಿಲ್ಲ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಹೆಚ್.ಎನ್. ರಮೇಶ್ ತಮ್ಮ ಮಾತಿನ ಮೂಲಕ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

 ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘ ಜಿಲ್ಲಾ ಸಮಿತಿಯಿಂದ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಕಟ್ಟಡ ಕಾರ್ಮಿಕರಿಗೆ ಕಾನೂನು ಅರಿವು ಮತ್ತು ಕಾರ್ಮಿಕರ ಕುಂದು ಕೊರತೆಗಳ ಮನನ ಕಾರ್ಯಕ್ರಮವನ್ನು ಜ್ಯೊತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕ ಮಂಡಳಿ 2007ರಲ್ಲಿ ಪ್ರಾರಂಭವಾಗಿದ್ದು, ಮಂಡಳಿ ರಚನೆ ಆಗಿ 10 ವರ್ಷಗಳು ಕಳೆದರೂ ಇನ್ನು ಅದರದ್ದೇ ಆದ ಸಂಪೂರ್ಣ ಅಧಿಕಾರ ಇರುವ ಅಧಿಕಾರಿಯನ್ನು ಸೃಷ್ಠಿ ಮಾಡಲು ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿ 25 ಸಾವಿರ ಜನ ಕಟ್ಟಡ ಕಾರ್ಮಿಕರು ನೊಂದಾಯಿಸಿಕೊಂಡಿದ್ದಾರೆ. ಆದರೇ ಕಛೇರಿಯಲ್ಲಿ ಕ್ವಾಲಿಟಿ ಇಲ್ಲದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಮಂಡಳಿಗಳಲ್ಲಿ ಇನ್ನು ಪೂರ್ಣ ಪ್ರಮಾಣದ ಸುಧಾರಣೆ ಆಗಿರುವುದಿಲ್ಲ. ಈ ಬಗ್ಗೆ ಮುಖ್ಯ ಕಛೇರಿಗೆ ನಾಲ್ಕು ಪುಟದ ವಿವರ ನೀಡಲಾಗಿದೆ. ಆದರೇ ಇದುವರೆಗೂ ಯಾವ ಸಲಹೆಯನ್ನು ಕೊಡಲಾಗಿಲ್ಲ ಹಾಗೂ ಮಂಡಳಿಯಿಂದ ಯಾವ ಕೆಲಸ ಆಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಜೊತೆಗೆ ಮಂಡಳಿಯಲ್ಲಿ ನನ್ನದೆ ಆದನಾನು ಪೂರ್ಣವಾದ ಅಧಿಕಾರಿ ಚಲಾಯಿಸಲು ನನಗೆ ನೀಡಿರುವುದಿಲ್ಲ. ಇತರರ ನಿರ್ದೇಶನದಂತೆ ಕೆಲಸ ಮಾಡಬೇಕಾಗಿದೆ ಎಂದು ಕಾರ್ಮಿಕರ ಮುಂದೆ ತಮ್ಮ ಅಳಲು ತೋಡಿಕೊಂಡರು.

    ಕಟ್ಟಡ ಕಾರ್ಮಿಕರು ನೀಡಲಾಗಿರುವ ಅರ್ಜಿಗಳು ಶೀಘ್ರ ವಿಲೇವಾರಿ ಆಗಿರುವುದಿಲ್ಲ. ಕಳೆದ ಎರಡು ವರ್ಷಗಳಿಂದ ಅರ್ಜಿ ಆಗಿ ಇದ್ದು, ಇದಕ್ಕಾಗಿಯೇ ಕಾರ್ಮಿಕರ ಸಂದರ್ಶನವನ್ನು ಮದ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೂ ನಿಗದಿಪಡಿಸಲಾಗಿದೆ. ಉಳಿದ ಸಮಯದಲ್ಲಿ ಅರ್ಜಿ ಬಗ್ಗೆ ಗಮನ ನೀಡುವುದಾಗಿ ಹೇಳಿದರು. ವಾರದ 6 ದಿನಗಳು ಕಛೇರಿ ತೆಗೆಯಲಾಗುತ್ತದೆ ಎಂದಾಗ ಕಾರ್ಮಿಕರು ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಅಧಿಕಾರಿ ಮಾತನ್ನು ಒಪ್ಪಿಕೊಂಡ ಘಟನೆ ನಡೆಯಿತು. ಇನ್ನು ಮುಂದೆ ಯಾವ ಯಾವ ಅಧಿಕಾರಿಗಳು ಕಛೇರಿಯಲ್ಲಿ ಇದ್ದಾರೆ ಅವರ ಹುದ್ದೆ ಹೆಸರನ್ನು ನಾಮಫಲಕದಲ್ಲಿ ತಿಳಿಸಲಾಗುವುದು ಎಂದರು. ಕಟ್ಟಡ ಕಾರ್ಮಿಕರ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಲು ನಿಗಾವಹಿಸುವುದಾಗಿ ಭರವಸೆ ನೀಡಿದರು.

ಇದೆ ವೇಳೆ ಐಎನ್‌ಟಿಯುಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ತಾರಚಂದನ್, ಕೆಎಸ್‌ಸಿಬ್ಲ್ಯೂಸಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಗಿರೀಶ್, ಕಾರ್ಮಿಕ ನಿರೀಕ್ಷಕರು ಜಯಪ್ರಕಾಶ್, ಆಲುರು ತಾಲೂಕು ಅಧ್ಯಕ್ಷ ಟಿ.ಆರ್. ಆನಂದ್, ಬೇಲೂರು ಅಧ್ಯಕ್ಷ ಹೆಚ್. ವೆಂಕಟೇಶ್, ಹಾಸನ ಅಧ್ಯಕ್ಷ ಹೆಚ್.ಎನ್. ಮಹೇಶ್, ಜಿಲ್ಲಾ ಉಪಾಧ್ಯಕ್ಷ ಹೆಚ್.ಎನ್. ಪ್ರಕಾಶ್, ಖಜಾಂಚಿ ಕೆ.ವಿ. ಸುಬ್ರಮಣ್ಯ, ಕಾರ್ಯದರ್ಶಿ ಹೆಚ್.ಎಲ್. ವಸಂತಕುಮಾರ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News