ಹೊಗಳುವ ಭರದಲ್ಲಿ ರಾಹುಲ್ ರನ್ನು ಪದೇ ಪದೇ "ಪಪ್ಪು" ಎಂದ ಕಾಂಗ್ರೆಸ್ ಮುಖಂಡ!

Update: 2017-06-14 10:26 GMT

ಮೀರತ್, ಜೂ.14: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪದೇ ಪದೇ "ಪಪ್ಪು" ಎಂದು ಕರೆದ ಉತ್ತರ ಪ್ರದೇಶದ ಹಿರಿಯ ಕಾಂಗ್ರೆಸ್ ಸದಸ್ಯರೊಬ್ಬರಿಂದ ಅವರು ಪಕ್ಷದಲ್ಲಿ ಹೊಂದಿದ್ದ ಎಲ್ಲಾ ಹುದ್ದೆಗಳನ್ನೂ ಕಿತ್ತುಕೊಳ್ಳಲಾಗಿದೆ.

ಪೊಲೀಸ್ ಗೋಲಿಬಾರಿನಲ್ಲಿ ಐದು ಮಂದಿ ರೈತರು ಮೃತಪಟ್ಟ ನಂತರ ಮಂದಸೌರ್ ಗೆ ಭೇಟಿ ನೀಡಲು ರಾಹುಲ್ ಮಾಡಿದ ಪ್ರಯತ್ನಗಳನ್ನು ಹೊಗಳುವ ಭರದಲ್ಲಿ ಸಾಮಾಜಿಕ ಜಾಲತಾಣದ ಸಂದೇಶವೊಂದರಲ್ಲಿ ರಾಹುಲ್ ಅವರನ್ನು "ಪಪ್ಪು" ಎಂದು ಕರೆಯಲಾಗಿತ್ತೆನ್ನಲಾಗಿದೆ. ರಾಹುಲ್ ಅವರ ರಾಜಕೀಯ ವಿರೋಧಿಗಳು ಅವರನ್ನು ಟೀಕಿಸುವಾಗಲೆಲ್ಲಾ "ಪಪ್ಪು" ಎಂಬ ಪದವನ್ನು ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಉಪಯೋಗಿಸುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಅದರೆ ಪಕ್ಷದ ಮೀರತ್ ಜಿಲ್ಲಾ ಘಟಕದ ಅಧ್ಯಕ್ಷ ವಿನಯ್ ಪ್ರಧಾನ್ ಕೂಡ  ರಾಹುಲ್ ಅವರನ್ನು  ಪಪ್ಪು ಎಂದು ಕರೆದು ವಾಟ್ಸ್ಯಾಪ್ ಗ್ರೂಪ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿಗೆ ಸಂದೇಶ ಕಳುಹಿಸಿದ್ದರೆನ್ನಲಾಗಿದೆ.

ಸ್ವಹಿತಕ್ಕಿಂತ ದೇಶದ ಹಿತವನ್ನು ಮೇಲು ಎಂದು ರಾಹುಲ್ ಪರಿಗಣಿಸಿದ್ದಾರೆ ಎಂದು ಅವರನ್ನು ಹೊಗಳುವ ಭರದಲ್ಲಿ ಪ್ರಧಾನ್ ತಮ್ಮ ಸಂದೇಶದಲ್ಲಿ "ಪಪ್ಪು ಅವರು ಅದಾನಿ, ಅಂಬಾನಿ, ಮಲ್ಯ ಅವರ ಜತೆ ಕೈಜೋಡಿಸಬಹುದಾಗಿದ್ದರೂ ಹಾಗೆ ಮಾಡಿರಲಿಲ್ಲ. ಪಪ್ಪು ಸಚಿವ ಅಥವಾ ಪ್ರಧಾನಿಯೂ ಆಗಬಹುದಿತ್ತು ಆದರೆ ಅವರು ಆ ಹಾದಿ ತುಳಿಯಲಿಲ್ಲ, ಬದಲಾಗಿ ಅಪಾಯಕಾರಿಯಾಗಬಹುದಾಗಿದ್ದರೂ ಮಂದಸೌರ್ ಗೆ ಹೋದರು' ಎಂದಿದ್ದರು.

ಮಂಗಳವಾರ  ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರಾಮಕೃಷ್ಣ ದ್ವಿವೇದಿ ಅವರು ಆದೇಶವೊಂದನ್ನು ನೀಡಿ ಪ್ರಧಾನ್ ಅವರ ಪ್ರಚೋದನಕಾರಿ ಸಂದೇಶಕ್ಕಾಗಿ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ವಿನಯ್ ಪ್ರಧಾನ್ ಮಾತ್ರ ತಾನು ಯಾವುದೇ ಸಂದೇಶ ಕಳುಹಿಸಿಲ್ಲ. ಪಕ್ಷ ನನ್ನ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ನನ್ನ ಅಭಿಪ್ರಾಯ ಕೇಳಬೇಕಿತ್ತು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News