ಶೃಂಗೇರಿ ಜಗದ್ಗುರುಗಳಿಗೆ ಅಪಮಾನ: ಕೇರಳ ಸರಕಾರದ ಕ್ರಮಕ್ಕೆ ಬ್ರಾಹ್ಮಣ ಮಹಾಸಭಾ ಖಂಡನೆ

Update: 2017-06-14 12:47 GMT

ಕಡೂರು, ಜೂ. 14: ಕೇರಳ ರಾಜ್ಯದ ತಿರುವಂತನಪುರದಲ್ಲಿ ಮಿತ್ರನಂದಪುರದ ಮಹಾವಿಷ್ಣು ದೇವಾಲಯದ ಕೆರೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲು ತೆರಳಿದ್ದ ಶೃಂಗೇರಿ ಜಗದ್ಗುರುಗಳಿಗೆ ಅಪಮಾನ ಮಾಡಿರುವ ಕೇರಳ ಸರ್ಕಾರದ ಕ್ರಮವನ್ನು ಬ್ರಾಹ್ಮಣ ಮಹಾಸಭಾ ತೀವ್ರವಾಗಿ ಖಂಡಿಸಿದೆ.
 
 ಬುಧವಾರ ಪಟ್ಟಣದ ಕೋಟೆ ಶ್ರೀ ಪ್ರಸನ್ನ ಗಂಗಾಧರೇಶ್ವರ ದೇವಾಲಯದಲ್ಲಿ ಸಭೆ ಸೇರಿದ್ದ ಬ್ರಾಹ್ಮಣ ಮಹಾಸಭಾ ಈ ಘಟನೆಯ ಕುರಿತು ಕೇರಳ ಸರಕಾರದ ಕ್ರಮವನ್ನು ಖಂಡಿಸಿತು.  

ಈ ಸಂದರ್ಭ ಬ್ರಾಹ್ಮಣ ಮಹಾಸಭಾದ ತಾಲೂಕು ಅಧ್ಯಕ್ಷ ಹೆಚ್.ಎನ್. ಶಿವಶಂಕರ್ ಮಾತನಾಡಿ, ಆದಿ ಶಂಕರಾಚಾರ್ಯರು ಜನ್ಮಸ್ಥಳ ಇರುವ ಕಾಲಾಡಿ ಇರುವ ಕೇರಳದಲ್ಲಿ ಶೃಂಗೇರಿ ಜಗದ್ಗುರುಗಳಿಗೆ ಅಪಮಾನಿಸಿರುವುದು ಅತ್ಯಂತ ಖೇದಕರ. ಶೃಂಗೇರಿ ಜಗದ್ಗುರುಗಳಿಗೆ ಕಾರ್ಯಕ್ರಮದಲ್ಲಿ ಹಾಕಿದ್ದ ಆಸನಗಳನ್ನು ಕೇರಳ ರಾಜ್ಯದ ಮುಜಾರಾಯಿ ಸಚಿವರು ತೆಗೆದು ಹಾಕಿದ್ದು ಇವರ ದುಂಡ ವರ್ತನೆದ್ದು ಕಾಣುತ್ತಿದೆ. ಸಚಿವರ ಪ್ಯಾಪಿಸ್ಟ್ ಮನೋಭಾವದ ವರ್ತನೆಗೆ ತಾಲೂಕು ಬ್ರಾಹ್ಮಣ ಮಹಾಸಭಾ ವಿರೋಧ ವ್ಯಕ್ತಪಡಿಸುತ್ತಿದೆ ಎಂದರು.

ಇತ್ತೀಚೆಗೆ ಕೇರಳದಲ್ಲಿ ಹಿಂದೂಗಳ ಧಾರ್ಮಿಕ ಭಾವನೆ ಹತ್ತಿಕ್ಕುವ ಕೆಲಸ, ಗುರು-ಹಿರಿಯರ ಮೇಲಿನ ಶ್ರದ್ದೆಗೆ ಧಕ್ಕೆ ತರುತ್ತಿರುವ ಕೇರಳ ಸರಕಾರವನ್ನು ವಜಾ ಮಾಡಬೇಕು. ಕೇರಳ ಸರ್ಕಾರ ಮತ್ತು ಮುಜಾರಾಯಿ ಸಚಿವರು ಶೃಂಗೇರಿ ಕಿರಿಯ ಜಗದ್ಗುರುಗಳಾದ ಶ್ರೀ ವಿದುಶೇಖರ ಭಾರತಿ ಸ್ವಾಮಿಗಳಿಗೆ ಮಾಡಿದ ಅಪಮಾನವಲ್ಲ, ಸಮಸ್ತ ಹಿಂದೂಗಳಿಗೆ ಮಾಡಿದ ಅಪಮಾನವಾಗಿದೆ, ಇದಕ್ಕಾಗಿ ಶ್ರೀಗಳಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಸಮಾಜದ ಹಿರಿಯರಾದ ಕೆ.ವಿ. ಚಂದ್ರಶೇಖರ್, ಟಿ.ಎಲ್. ರಾಘವೇಂದ್ರ, ಬಿ.ಕೆ. ದಿವಾಕರ್ ಮಾತನಾಡಿ ಕೇರಳ ಸರ್ಕಾರದ ಕ್ರಮವನ್ನು ಖಂಡಿಸಿದರು.
 ಈ ವೇಳೆ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಡಿ. ವೈಕುಂಠ ನಕ್ಷತ್ರಿ, ಎಂ.ಜೆ. ಅಂಬಾಜಿರಾವ್, ಟಿ.ಆರ್. ಸುರೇಶ್, ದ್ವಾರಕನಾಥ್, ಸಂಪತ್ ಅಯ್ಯಂಗಾರ್, ಕೆ. ರಮೇಶ್, ವೆಂಕಟೇಶ್ ಪದರೆ, ಬಿಳಿಗಿರಿ ವಿಜಯಕುಮಾರ್, ಗಿರೀಶ್, ಭಾಗ್ಯ ವಿಶ್ವನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News