ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಅರೆಬೆತ್ತಲೆ ಪ್ರತಿಭಟನೆ
ಮಂಡ್ಯ, ಜೂ.14: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಜಿಲ್ಲಾ ಪಂಚಾಯತ್ ಅವ್ಯವಹಾರ ಕಾಮಗಾರಿಗಳ ವಿರುದ್ಧ ಲಿಂಗಮ್ಮನಹಳ್ಳಿ ಗೋವಿಂದರಾಜು ನೇತೃತ್ವದಲ್ಲಿ ಬೋವಿ ಜನಾಂಗದವರು ಬುಧವಾರ ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಪ್ರತಿಭಟಿಸಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ, ಜಿಪಂ ಅವ್ಯವಹಾರ ಕಾಗಮಾರಿಗಳ ವಿರುದ್ಧ ಕ್ರಮವಹಿಸದಿದ್ದರೆ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸುವುದಾಗಿ ಎಚ್ಚರಿಸಿದರು.
ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ದೂರು ನೀಡಿದರೂ, ಪ್ರತಿಭಟನೆ ನಡೆಸಿದರೂ ಕ್ರಮ ವಹಿಸಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಕೂಡಲೇ ಅಕ್ರಮ ಕಲ್ಲುಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮವಹಿಸಬೇಕು. ಅಕ್ರಮ ಜಲ್ಲಿ ಕ್ರಷರ್‌ಗಳನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಿದರು. ಹಾಗೂ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.
ಕೃಷ್ಣ, ಚಂದ್ರು, ಶೇಖರ್, ಮಂಜು, ಹರೀಶ್, ಶಿವಕುಮಾರ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.