ಕಾಡಾನೆ ದಾಳಿ: ಅಪಾಯದಿಂದ ಪಾರಾದ ಬೈಕ್ ಸವಾರ
ಮಡಿಕೇರಿ, ಜೂ.15: ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಇಂದು ಬೆಳಗ್ಗೆ ಮೀನುಕೊಲ್ಲಿ ಎಂಬಲ್ಲಿ ಬೈಕ್ ಸವಾರನೊಬ್ಬನ ಮೇಲೆ ಕಾಡಾನೆ ದಾಳಿಗೆ ಮುಂದಾಗಿದೆ. ಅದೃಷ್ಟವಶಾತ್ ಬೈಕ್ ಚಾಲಕ ಕಂಡಕೆರೆಯ ನಿವಾಸಿ ಸಲಾಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಚೆಟ್ಟಳ್ಳಿಯ ಕಾಫಿ ಮಂಡಳಿ ವ್ಯಾಪ್ತಿಯಿಂದ ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ತೆರಳಲಾಗದ ಕಾಡಾನೆ ರಸ್ತೆಯಲ್ಲಿ ಸುತ್ತಾಡುತ್ತಿದ್ದು, ಬೆಳಗ್ಗೆ 8 ಗಂಟೆಯ ಸುಮಾರಿಗೆ ಸಲಾಂ ಎಂಬವರು ಕಂಡಕೆರೆಯಿಂದ ಸುಂಟಿಕೊಪ್ಪಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಈ ಸಂದರ್ಭ ಸಲಾಂ ಬೈಕ್ ಬಿಟ್ಟು ಓಡಿದ್ದಾರೆ. ನಂತರ ಕಾಡಾನೆ ಬೈಕ್ ಗೆ ಹಾನಿ ಮಾಡಿದೆ.
ಶಾಲೆಗೆಂದು ತೆರಳುತ್ತಿದ್ದ ವಿದ್ಯಾರ್ಥಿಗಳು ಕಾಡಾನೆಯನ್ನು ಕಂಡು ಭಯದಿಂದ ಓಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳಾದ ಕೊಚ್ಚೆರ ನೆಹರು, ಕನ್ನಂಡ ರಂಜನ್, ಬಾನಂಡ ದೇವಿ ಪ್ರಸಾದ್, ಸ್ಥಳೀಯ ಠಾಣಾಧಿಕಾರಿ ಪ್ರಕಾಶ್ ಮತ್ತಿತರರು ಭೇಟಿ ನೀಡಿ, ಆನೆಯ ಚಲನ ವಲನದ ಬಗ್ಗೆ ನಿಗಾ ವಹಿಸಿದರು.
ಕಾಡಾನೆ ಸಾಗುವ ಮಾರ್ಗವನ್ನು ಸುಗಮಗೊಳಿಸುವುದರೊಂದಿಗೆ ಉಪಟಳ ತಡೆಗೆ ಕ್ರಮ ಕೈಗೊಳ್ಳುವುದಾಗಿ ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು. ಚೆಟ್ಟಳ್ಳಿಯಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು, ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.