×
Ad

ಸಾಲಮನ್ನಾಗೆ ಆಗ್ರಹಿಸಿ ಜು.10 ರಂದು ಬಿಜೆಪಿ ಬೃಹತ್ ಪ್ರತಿಭಟನೆ

Update: 2017-06-15 22:22 IST

ಮಂಡ್ಯ, ಜೂ.15: ತನ್ನ ಬರಪರಿಸ್ಥಿತಿ ಅಧ್ಯಯನದ ಭಾಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುರುವಾರ ಜಿಲ್ಲೆಯ ವಿವಿಧೆಡೆ ಪ್ರವಾಸಿ ಮಾಡಿ, ದಲಿತರ ಮನೆಯಲ್ಲಿ ಉಪಾಹಾರ ಸೇವಿಸಿ ಸಮಸ್ಯೆ ಆಲಿಸಿದರು.

ಮದ್ದೂರು ತಾಲೂಕಿನ ಕೊತ್ತನಹಳ್ಳಿ, ಪಾಂಡವಪುರದ ತಾಳಶಾಸನ, ಮಂಡ್ಯದ ತಮಿಳು ಕಾಲನಿ ಹಾಗೂ ಶ್ರೀರಂಗಪಟ್ಟಣಕ್ಕೆ ಭೇಟಿ ನಿಡಿದರು. ಇದೇವೇಳೆ ಮದ್ದೂರು (ದೇಶಹಳ್ಳಿ) ಕೆರೆ ಹಾಗೂ ಪಾಂಡವಪುರ ಹಿರೋಡೆ ಕೆರೆ ವೀಕ್ಷಣೆ ಮಾಡಿದರು.

ಕೊತ್ತನಹಳ್ಳಿಯ ದಲಿತ ದೊಡ್ಡಯ್ಯ ಅವರ ಮನೆಯಲ್ಲಿ ಉಪಾಹಾರ ಸೇವಿಸಿದ ನಂತರ ಮಾತನಾಡಿದ ಅವರು, ರೈತರ ಸಹಕಾರ ಸಂಘಗಳ ಸಾಲಮನ್ನಾಗೆ ರಾಜ್ಯ ಸರಕಾರವನ್ನು ಆಗ್ರಹಿಸಿ ಜು.10 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ಸಾಲಮನ್ನಾಮಾಡಿ, ಇಲ್ಲವೇ ಅಧಿಕಾರ ಬಿಟ್ಟುಹೋಗಿ ಘೋಷಣೆಯೊಂದಿಗೆ ಬೆಂಗಳೂರಿನಲ್ಲಿ ಜು.7 ರಿಂದ 9ರವರೆಗೆ ಉಪವಾಸ ಸತ್ಯಾಗ್ರಹ ನಡೆಸಿ 10 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು. ಇದರಲ್ಲಿ ಲಕ್ಷಾಂತರ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ರೈತರ ಸಾಲಮನ್ನಾ ಮಾಡುವುದು ಆಯಾ ರಾಜ್ಯಗಳ ಜವಾಬ್ದರಿಯಾಗಿದ್ದು,  ಈಗಾಗಲೇ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ ಸರಕಾರಗಳು ಸಾಲಮನ್ನಾ ಮಾಡಿವೆ. ಕೇಂದ್ರದ ಮೇಲೆ ಗೂಬೆ ಕೂರಿಸುರುವುದು ಸರಿಯಲ್ಲ ಎಂದು ಅವರು ಹೇಳಿಕೊಂಡರು.

ಬರದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಾಲ್ಕುವರ್ಷದಿಂದ 200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಸಾಲಮನ್ನಾ ಮಾಡದೆ ಮೀನಾಮೇಷ ಎಣಿಸುತ್ತಿದೆ ಎಂದು ಅವರು ಕಿಡಿಕಾರಿದರು.
ರಾಜ್ಯ ಸರಕಾರ ಕೇಂದ್ರ ಸರಕಾರದ ಅನುದಾನವನ್ನು ಸಪರ್ಪಕವಾಗಿ ಬಳಕೆ ಮಾಡಿಕೊಂಡಿಲ್ಲ. ದಲಿತರು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು.

ಪ್ರಚಾರಕ್ಕೆಂದು ದಲಿತರ ಮನೆಯಲ್ಲಿ ಆಹಾರ ಸೇವನೆ ಮಾಡುತ್ತಿಲ್ಲ. ದಲಿತರು, ಹಿಂದುಳಿದವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ಪ್ರವಾಸ ಮಾಡುತ್ತಿದ್ದೇನೆ ಎಂದು ತನ್ನ ಪ್ರವಾಸವನ್ನು ಯಡಿಯೂರಪ್ಪ ಸಮರ್ಥಿಸಿಕೊಂಡರು.

ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಸಂಸದೆ ತೇಜಸ್ವಿನಿಗೌಡ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಪ್ರ.ಕಾರ್ಯದರ್ಶಿ ಮಲ್ಲಿಕಾರ್ಜುನ್, ಸ್ಲಂ ಮೋರ್ಚಾ ಜಿಲ್ಲಾಧ್ಯಕ್ಷ ಕೆಂಪಬೋರಯ್ಯ, ಮದ್ದೂರು ತಾಲೂಕು ಅಧ್ಯಕ್ಷ ಲಕ್ಷ್ಮಣಕುಮಾರ್, ಎಂ.ಸಿ.ಸಿದ್ದು, ಗುರುಮಲ್ಲೇಶ್, ವೀರಭದ್ರಸ್ವಾಮಿ, ಶಿವಣ್ಣ, ಸತೀಶ್, ಸಿದ್ದರಾಜುಗೌಡ, ಇತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News