×
Ad

ಹಕ್ಕು ಪತ್ರ ನೀಡಿ ಇಲ್ಲ ವಿಷ ಕೊಡಿ: ನಿವಾಸಿಗಳು ಆಗ್ರಹ

Update: 2017-06-15 22:24 IST

ದಾವಣಗೆರೆ, ಜೂ. 15: ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡಿ, ಅಥವಾ ವಿಷ ಕೊಡಿ ಎಂದು ಚನ್ನಗಿರಿ ತಾಲೂಕು ಹೊಸಹಳ್ಳಿ ಗ್ರಾಮದ ಸಂತ್ರಸ್ಥರಾದ ವಿಜಯಲಕ್ಷ್ಮಿ ಮತ್ತಿತರರು ಮೊರೆ ಇಟ್ಟಿದ್ದಾರೆ.

ಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಗಿರಿ ತಾಲೂಕು ದೇವರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ಸರ್ಕಾರಿ ಜಾಗದಲ್ಲಿ ಕಳೆದ 25 ವರ್ಷಗಳಿಂದ ಸುಮಾರು 47 ಕುಟುಂಬಗಳು ವಾಸವಾಗಿವೆ. ಸರ್ಕಾರದ ಅಕ್ರಮ-ಸಕ್ರಮ ಯೋಜನೆಯಡಿ ಮನೆ ಮಂಜೂರಾತಿಗೆ ಎಲ್ಲಾ 47 ಕುಟುಂಬಗಳು ಅರ್ಜಿ ಸಲ್ಲಿಸಿದ್ದು, ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ತಹಶೀಲ್ದಾರರಿಗೆ ವರದಿ ಸಲ್ಲಿಸಿದ್ದಾರೆ. ಆದರೂ, ನಿವೇಶನ ಮಂಜೂರಾತಿ ಪತ್ರ ನೀಡುವಲ್ಲಿ ತಹಸೀಲ್ದಾರ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.

ಗ್ರಾಪಂ ಪಿಡಿಒ, ಅಧ್ಯಕ್ಷರು ಹಾಗೂ ಸದಸ್ಯರು ಯಾವುದೇ ಮುನ್ಸೂಚನೆ ನೀಡದೆ ದೌರ್ಜನ್ಯದಿಂದ ಏಕಾಏಕಿ ಮನೆ ಕೆಡವಿದ್ದಾರೆ. ಈ ಬಗ್ಗೆ ತಹಶೀಲ್ದಾರ್‌ಗೆ ದೂರು ನೀಡಿದರೂ, ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ಕೂಡಲೇ ನಮಗೆ ಹಕ್ಕುಪತ್ರ ನೀಡಬೇಕು, ಇಲ್ಲವೇ ವಿಷ ಕೊಡಬೇಕು ಎಂದು ಅವರು ಅಳಲು ತೋಡಿಕೊಂಡರು.

ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಮಾತನಾಡಿ, ಚನ್ನಗಿರಿ ತಹಸೀಲ್ದಾರ್ ಪದ್ಮಕುಮಾರಿ ಕಾರ್ಯನಿರ್ವಹಣೆ ತೃಪ್ತಿಕರವಾಗಿಲ್ಲ. ತಮ್ಮ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ತಹಶೀಲ್ದಾರರು ವಿಫಲರಾಗಿದ್ದಾರೆ. ತಕ್ಷಣ ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಫಲಾನುಭವಿಗಳಾದ ಕಲ್ಲೇಶ್, ಮಂಜುನಾಥ್, ರಂಗಪ್ಪ, ನಿಂಗಮ್ಮ, ಸುಧಮ್ಮ, ದೇವಿರಮ್ಮ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News