×
Ad

ದಲಿತ ಮುಖಂಡರಿಂದ ಕಪ್ಪು ಪಟ್ಟಿಯೊಂದಿಗೆ ಪ್ರತಿಭಟನೆಯ ಶಾಕ್

Update: 2017-06-16 16:39 IST

ಹಾಸನ.ಜೂ.16: ತಾಲೂಕಿನ ತಟ್ಟೆಕೆರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗಮಿಸುವ ವೇಳೆ ಕೆಲ ದಲಿತ ಮುಖಂಡರು ಕಪ್ಪು ಪಟ್ಟಿಯೊಂದಿಗೆ ಪ್ರತಿಭಟನೆ ಮಾಡುವ ಮೂಲಕ ಶಾಕ್ ನೀಡಿದರೂ ಕುಡ ಅಭೂತಪೂರ್ವ ಸ್ವಾಗತ ಕಂಡು ಬಂದಿತು.

ತಟ್ಟೆಕೆರೆ ಗ್ರಾಮದ ದಲಿತ ಆಟೋ ಚಾಲಕನಾದ ಪ್ರಕಾಶ್ ಎಂಬುವವರ ಮನೆಗೆ ಶುಕ್ರವಾರ ಬೆಳಿಗ್ಗೆ ಸುಮಾರು 10-50ಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಅವರಿಗೆ ರಾಗಿರೊಟ್ಟಿ ಉಚ್ಚಲ್ ಚೆಟ್ನಿ, ಅಕ್ಕಿ ರೊಟ್ಟಿ ಕಾರ ಚೆಟ್ನಿ, ಅವರೆಕಾಳು ಉಪ್ಪಿಟು ಕಾದಿತ್ತು. ಪ್ರಕಾಶ್ ಪತ್ನಿ ರುಕ್ಮಿಣಿ ಅವರು ಹೊಲೆಯಲ್ಲಿ ಆಗತಾನೆ ಬೇಯಿಸಿದ ಬಿಸಿ ಬಿಸಿ ರಾಗಿರೊಟ್ಟಿಯನ್ನು ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರವಿಕುಮಾರ್, ಜಿಲ್ಲಾಧ್ಯಕ್ಷ ಯೋಗರಮೇಶ್ ಹಾಗೂ ಉಪಾಧ್ಯಕ್ಷ ಪ್ರೀತಮ್ ಜೆ. ಗೌಡ ಇತರರಿಗೆ ನೀಡಿದರು. ಅತಿಥಿಗಳು ಬಾಯಿತುಂಬ ಉಪಹಾರ ಸೇವಿಸಿ ಆನಂದಿಸಿದರು.

ಇದಕ್ಕೆ ಮೊದಲು ಗ್ರಾಮಕ್ಕೆ ಆಗಮಿಸುತಿದ್ದಂತೆ ಊರಿನ ಮುಖ್ಯ ದ್ವಾರದ ಸಮೀಪ ಹಿರಿಯ ದಲಿತ ಮುಖಂಡ ನಾರಾಯಣದಾಸ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಆನೆಕೆರೆ ರಾವಿ, ಮೀಸೆ ಮಂಜಣ್ಣ, ಅಂಗಡಿ ರಾಜಣ್ಣ, ಅನಂತರಾಜು, ಕಂಚನಹಳ್ಳಿ ಕೃಷ್ಣೇಗೌಡ ಇತರರು ಕೈಲಿ ಕಪ್ಪು ಪಟ್ಟಿ ಹಿಡಿದು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಗೋಹತ್ಯೆ ನಿಷೇಧ ಜಾರಿಗೆ ತರುವ ಮೂಲಕ ಆಹಾರದ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಂದಿನ ದಿನಗಳಲ್ಲಿ ಮಾತ್ರ ದಲಿತರ ಮನೆಯಲ್ಲಿ ಉಪಹಾರ ಸೇವನೆ ಮಾಡುತ್ತಿರುವುದರ ಉದ್ದೇಶ ಏನಿದೆ. ಇದುವರೆಗೂ ಶೋಷಿತ ವರ್ಗಗಳ ಹೇಳಿಗೆಗೆ ಶ್ರಮಿಸಿಲ್ಲ. ಗೋತ್ಯೆ ನಿಷೇಧ ಕಾಯಿದೆಯನ್ನು ಕೇಂದ್ರ ಜಾರಿಗೆ ತರುವ ಮೂಲಕ ಲಕ್ಷಾಂತರ ಜನರ ಉದ್ಯೋಗ ನಾಶ ಮಾಡಲಾಗಿದೆ ಎಂದು ತಮ್ಮ ಪ್ರತಿಭಟನೆಯಲ್ಲಿ ಆಕ್ರೋಶವ್ಯಕ್ತಪಡಿಸಿದರು.

ಆದರೇ ಇದನ್ನೆಲ್ಲಾ ಲೆಕ್ಕಿಸದ ಬಿಜೆಪಿ ಅಭಿಮಾನಿಗಳು ನಗರದಿಂದ ಸಾವಿರಾರು ಜನ ಬೈಕ್ ರ್ಯಾಲಿ ಮೂಲಕ ಯಡಿಯೂರಪ್ಪ ಅವರನ್ನು ತಟ್ಟೆಕೆರೆಗೆ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ನಂತರ ಸಭಾ ಕ್ರಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿನ ಜನರ ಸಮಸ್ಯೆಯನ್ನು ಆಲಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News