×
Ad

224 ಕ್ಷೇತ್ರಗಳಲ್ಲೂ ಬಿಜೆಪಿ ಸ್ಪರ್ದೆ: ಬಿ.ಎಸ್. ಯಡಿಯೂರಪ್ಪ

Update: 2017-06-16 16:49 IST

ಹಾಸನ,ಜೂ.16: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಇತರೆ ಪಕ್ಷದೊಂದಿಗೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. 224 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಸ್ಪರ್ಧೆ ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ನಗರದ ಖಾಸಗಿ ಹೊಟೇಲ್‌  ಒಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತಿಚಿಗೆ ನಡೆದ ಹೊಂದಾಣಿಕೆಯು ಸಭಾಪತಿಗೆ ಸಂಬಂಧಪಟ್ಟಿದ್ದು, ಇದು ರಾಜಕೀಯಕ್ಕೆ ಸೇರಿಲ್ಲ. ಬಿಜೆಪಿ ಪಕ್ಷದಲ್ಲಿ ಹೊಂದಾಣಿಕೆಯ ಪ್ರಶ್ನೆಯೇ ಇರುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ದೆ ಮಾಡುವುದಾಗಿ ಹೇಳಿದರು.

ರಾಜ್ಯದಲ್ಲಿ ಈಗಾಗಲೇ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದ್ದು, 21ನೇ ಜಿಲ್ಲೆ ಹಾಸನಕ್ಕೆ ಬಂದಿರುವುದಾಗಿ ಹೇಳಿದರು. ದಲಿತರ ಮನೆಯಲ್ಲಿ ಉಪಹಾರ ಸೇವಿಸಿ ಸಮಸ್ಯೆಯನ್ನು ಆಲಿಸಿ ಸಮಲೋಚಿಸಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ಸಾಧನೆ ಎಂದರೇ ಭ್ರಷ್ಟಚಾರದಲ್ಲಿ ಇಡೀ ದೇಶದಲ್ಲೆ ರಾಜ್ಯ ಮೊದಲ ಸ್ಥಾನದಲ್ಲಿದೆ. ಸಮೀಕ್ಷೆಯಿಂದ ತಿಳಿದು ಬಂದಿದೆ.

ಹದಗೆಟ್ಟ ಕಾನೂನು ಸುವ್ಯವಸ್ಥೆ, 4 ವರ್ಷಗಳಲ್ಲಿ 3,102 ಅತ್ಯಾಚಾರ, 2534 ಮಹಿಳೆಯರ ಕೊಲೆ, 420 ಮಹಿಳೆ ಅಪಹರಣ, 19,300 ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಇವೆಲ್ಲಾ ಸದನದಲ್ಲೆ ನೀಡಿರುವ ಅಂಕಿ-ಅಂಶಗಳು. ರೈತರ ಆತ್ಮಹತ್ಯೆಗಳಲ್ಲಿ ರಾಜ್ಯ ಮೂರನೇ ಸ್ಥಾನ ಹೊಂದಿದೆ. ಕಳೆದ 5 ತಿಂಗಳಲ್ಲಿ 300ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಜಿಲ್ಲೆಯಲ್ಲಿ 5 ತಿಂಗಳಲ್ಲಿ 39 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ಅರಸೀಕೆರೆಯಲ್ಲಿ ರೈತ ಶಶಿಕುಮಾರ್ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.

ಸರಕಾರದ ಮೊದಲ ಆದ್ಯ ಕರ್ತವ್ಯ ನೀರಾವರಿಗೆ ಹೆಚ್ಚಿನ ಮಹತ್ವ ಕೊಡಬೇಕು. ಸದನದಲ್ಲಿ 32 ಸಾವಿರದ 324 ಕೋಟಿ ರೂ. ಸಣ್ಣ ಮತ್ತು ಮಧ್ಯಮ ನೀರಾವರಿಗೆ ಶರ್ಚು ಮಾಡಿದ್ದಾರೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ಅಧಿಕಾರ ಮಾಡದಂತಹ ಅಭದ್ರತೆ ಕಾಣುತ್ತಿರುವುದಾಗಿ ದೂರಿದ ಅವರು, ಲೋಕಾಯುಕ್ತ ಇಲಾಖೆಯನ್ನು ಸಂಪೂರ್ಣ ಶಕ್ತಿ ಇಲ್ಲದಂತೆ ಮಾಡಿ, ಎಬಿಸಿ ಸ್ಥಾಪಿಸಿರುವ ರಾಜ್ಯ ಸರಕಾರ ತಮಗೆ ಇಷ್ಟ ಬಂದಂತೆ ಉಪಯೋಗವಾಗುತ್ತಿದೆ ಎಂದರು.

ಇದನ್ನೆಲ್ಲಾ ಖಂಡಿಸಿ ಜುಲೈ 7 ಮತ್ತು 8 ರಂದು ಸತ್ಯಗ್ರಹ ಹಮ್ಮಿಕೊಳ್ಳಲಾಗಿದೆ. 10 ರಂದು 10 ಲಕ್ಷಕ್ಕೂ ಹೆಚ್ಚು ಜನರು ವಿಧಾನಸೌದದ ಮುಂದೆ ಸತ್ಯಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.

ನಾನು ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿ ಇದ್ದಾಗ ಜಾವಗಲ್, ಹಳೇಬೀಡು, ಮಾದಿಹಳ್ಳಿ ಸೇರಿದಂತೆ ಇತರೆ ಕಡೆಗಳ ನೀರಿಗಾಗಿ ಅಂದು ಕಾಲ್ನಡಿಗೆ ಜಾಥ ಮಾಡಿದ್ದು, 2010 ರಲ್ಲಿ ನಾನು ಅಧಿಕಾರಕ್ಕೆ ಬಂದ ಮೇಲೆ 14 ಕೋಟಿ 80 ಲಕ್ಷ ರೂಗಳನ್ನು ಕಾಮಗಾರಿಗೆ ಬಿಡುಗಡೆ ಮಾಡಿದರೂ ಇದುವರೆಗೂ ಕಾಮಗಾರಿ ಆಗಿರುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

900 ವರ್ಷಗಳ ಇತಿಹಾಸ ಪ್ರಸಿದ್ಧ ಬೇಲೂರಿನ ಸಾಂಸ್ಕೃತಿಕ ಚೆನ್ನಕೇಶವ ದೇವಾಲಯದ ಅಭಿವೃದ್ಧಿಗೆ ಹಣ ಬಿಡುಗಡೆಗೆ ಒತ್ತಾಯಿಸುವುದಾಗಿ ಹೇಳಿದರು. ಹಾಸನ ಜಿಲ್ಲೆ ಎಂದರೇ ಆಲೂಗೆಡ್ಡೆಗೆ ಪ್ರಸಿದ್ಧವಾಗಿದೆ. ಆದರೇ ರಾಜ್ಯ ಸರಕಾರ ಉತ್ತಮ ಬೀಜ ನೀಡುವಲ್ಲಿ ವಿಫಲವಾಗಿದೆ. 2 ಸಾವಿರ 20 ಟನ್ ಬಿತ್ತನೆ ಬೀಜ ಬಂದಿದ್ದು, 1 ಕೆಜಿಗೆ 24 ರೂ ದರ ನಿಗಧಿ ಮಾಡಿ, ಸಹಾಯಧನವಾಗಿ ಕೊಡಲಾಗಿತ್ತು. ಆದರೇ ಬಿತ್ತನೆ ಬೀಜ ಕಳಪೆ ಆಗಿದೆ ಎಂದು ದೂರು ಬಂದಿದೆ. ಕೋಲ್ಡ್ ಸ್ಟೋರೆಜ್ ಚಿಕ್ಕ ಪ್ರಮಾಣದಲ್ಲಿ ಇದ್ದು, ಇನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಸರಕಾರವು ಒತ್ತು ನೀಡಬೇಕಾಗಿದೆ ಎಂದು ಒತ್ತಾಯಿಸಿದರು.

 ರಾಜ್ಯದಲ್ಲಿ ಸಾಲಮನ್ನಾ ಮಾಡುವುದು ಆಯಾ ರಾಜ್ಯ ಸರಕಾರಗಳಿಗೆ ಸಂಬಂಧಿಸಿದ ವಿಚಾರವಾಗಿದ್ದು, ಮೀನಮೇಶ ಮಾಡದೆ ಸಾಲಮನ್ನಾ ಮಾಡುವಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿರುವ ಹೇಳಿಕೆಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ದಲಿತರ ಹಾಗೂ ಹಿಂದುಳಿದವರ ಮನೆ ಖಾತೆ ಬದಲಾವಣೆ ಆಗಿಲ್ಲ, ಅನೇಕ ಕಡೆಗಳಲ್ಲಿ ಶೌಚಾಲಯಗಳಿಲ್ಲ, ಕೇಂದ್ರ ಕೊಟ್ಟ ಹಣವನ್ನು ರಾಜ್ಯ ಸರಕಾರ ತನ್ನದೆಂದು ಬಿಂಬಿಸಿಕೊಳ್ಳುತ್ತಿದೆ. ಶಿಕ್ಷಣ ಪಡೆದವರಿಗೆ ಉದ್ಯೋಗವಿಲ್ಲ ಎಂದರು. ಸಮಸ್ಯೆ ತಿಳಿಯುವ ಉದ್ದೇಶದಲ್ಲಿ ದಲಿತರ ಭಾಗಗಳಿಗೆ ಹೋಗಿ ಸಮಸ್ಯೆ ಆಲಿಸಲಾಗುತ್ತಿದೆ. ಗೋವು ನಿಷೇಧ ಆಯಾ ರಾಜ್ಯಕ್ಕೆ ಸಂಬಂಧಿಸಿದೆ ಎಂದು ಕೇಂದ್ರ ಸ್ಪಷ್ಟವಾಗಿ ಹೇಳಿದೆ. 24 ರಾಜ್ಯಗಳಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಇದೆ ಎಂದರು.

ಇದೆ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರವಿಕುಮಾರ್, ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಜಿಲ್ಲಾಧ್ಯಕ್ಷ ಯೋಗರಮೇಶ್, ಬಿ.ಆರ್. ಗುರುದೇವ್, ಹಾಗೂ ಉಪಾಧ್ಯಕ್ಷ ಪ್ರೀತಮ್ ಜೆ. ಗೌಡ, ಪರ್ವತಯ್ಯ, ಮಲ್ಲಿಗೆವಾಳ್ ದೇವಪ್ಪ, ಅಗಿಲೆ ಯೋಗೀಶ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News