ಸರ್ಕಾರಿ ಸಿಟಿ ಬಸ್ ಓಡಿಸಲು ಆಗ್ರಹಿಸಿ ದಲಿತ ಕ್ರಿಯಾ ಸಮಿತಿಯಿಂದ ಪ್ರತಿಭಟನೆ
ಶಿವಮೊಗ್ಗ, ಜೂ. 16: ನಗರದ ಮದಾರಿಪಾಳ್ಯ ಬಡಾವಣೆಗೆ ಸರಕಾರಿ ಸಿಟಿ ಬಸ್ ಓಡಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಕಾರ್ಯಕರ್ತರು ಶುಕ್ರವಾರ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯುತ್ತಿದ್ದ ಸಾರಿಗೆ ಪ್ರಾಧಿಕಾರದ ಸಭೆಯ ಹೊರಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ಅರ್ಪಿಸಿತು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮದಾರಿಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಿಗೆ ಸಮರ್ಪಕ ಸಾರಿಗೆ ಸೌಕರ್ಯ ಇಲ್ಲವಾಗಿದೆ. ಇದರಿಂದ ನಾಗರೀಕರು ತೀವ್ರ ತೊಂದರೆ ಪಡುವಂತಾಗಿದೆ. ನಾನಾ ಕೆಲಸ ಕಾರ್ಯದ ನಿಮಿತ್ತ ಓಡಾಡುವವರು, ಶಾಲಾ - ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸುಮಾರು ಎರಡು ಕಿ.ಮೀ.ನಷ್ಟು ನಡೆದು ಬಸ್ ಹಿಡಿಯುವಂತಹ ಸ್ಥಿತಿಯಿದೆ. ದುಬಾರಿ ದರ ತೆತ್ತು ಆಟೋಗಳಲ್ಲಿ ಓಡಾಡುವಂತಾಗಿದೆ ಎಂದು ಸಮಿತಿ ದೂರಿದೆ.
ಈಗಾಗಲೇ ಹಲವು ಬಾರಿ ಬಡಾವಣೆಗೆ ಸರಕಾರಿ ಸಿಟಿ ಬಸ್ ಓಡಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಲಾಗಿದೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿತ್ತು.
ಈ ಹಿನ್ನೆಲೆಯಲ್ಲಿ ಜೆನ್ ನರ್ಮ್ ಯೋಜನೆಯಡಿ ನಗರಕ್ಕೆ ಮಂಜೂರಾಗಿರುವ ಸರ್ಕಾರಿ ಸಿಟಿ ಬಸ್‌ಗಳನ್ನು ಮದಾರಿಪಾಳ್ಯಕ್ಕೂ ಓಡಿಸಬೇಕು. ಬೆಳಿಗ್ಗೆ 8.30 ಕ್ಕೆ ಕಡೇಕಲ್‌ನಿಂದ ಹೊರಟು, ಕುಸ್ಕೂರು, ಸಿದ್ದರಹಳ್ಳಿ, ಮತ್ತೂರು, ಸೂಳೇಬೈಲು, ಬೈಪಾಸ್ ಮೂಲಕ ಮದಾರಿಪಾಳ್ಯ, ನಂಜಪ್ಪ ಲೇಔಟ್, ಸಹ್ಯಾದ್ರಿ ಹಾಸ್ಟೆಲ್ ಪಕ್ಕದ ರಸ್ತೆ, ವಿದ್ಯಾನಗರದ ಮೂಲಕ ಬಸ್ ನಿಲ್ದಾಣಕ್ಕೆ ಬಸ್ ಓಡಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಸಂಘಟನೆ ಆಗ್ರಹಿಸಿತು. ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಮುಖಂಡ ಭಗವಾನ್‌ವಹಿಸಿದ್ದರು.