ಗ್ರಾಹಕರ ಸೋಗಿನಲ್ಲಿ ಕಳ್ಳರ ಕೈ ಚಳಕ: ಚಿನ್ನಾಭರಣ ಸಹಿತ ನಗದು ದೋಚಿದ ಖದೀಮರು

Update: 2017-06-16 12:58 GMT

ಗುಂಡ್ಲುಪೇಟೆ : ತಾಲೂಕಿನ ತೆರಕಣಾಂಬಿ ಗ್ರಾಮದ ಚಿನ್ನದ ಅಂಗಡಿಯಲ್ಲಿ ವ್ಯಾಪಾರ ಮಾಡುವ ಸೋಗಿನಲ್ಲಿ ಬಂದ ಇಬ್ಬರು ಕಳ್ಳರು ಅಂಗಡಿ ಮಾಲೀಕನಿಗೆ ಮಂಕುಬೂದಿ ಎರಚಿ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ.

ಗ್ರಾಮದ ಪ್ರದೀಪ್ ಜುವೆಲ್ಲರ್ ಹಾಗೂ ಪಾನ್ ಬ್ರೋಕರ್ ಅಂಗಡಿಯಲ್ಲಿ ಜೂನ್ 15ರ ಸಂಜೆ ಘಟನೆ ನಡೆದಿದ್ದು ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಲಾಲ್‌ಜಿ ಎಂಬುವರಿಗೆ ಸೇರಿದ ಚಿನ್ನದ ಅಂಗಡಿಗೆ ಆಗಮಿಸಿದ ಇಬ್ಬರು ಮಲೆಯಾಳಂ ಮಾನತಾಡುತ್ತಿದ್ದ ಕಳ್ಳರು ಆಭರಣ ಖರೀದಿಸುವ ನೆಪದಲ್ಲಿ ಸಂಜೆ 7 ಗಂಟೆ ಸಮಯದಲ್ಲಿ ಕೃತ್ಯವೆಸಗಿದ್ದಾರೆ.

ಅಂಗಡಿಯಲ್ಲಿದ್ದ ಮಾಲೀಕರ ಮಗ ಪ್ರದೀಪ್‌ಗೆ 500 ರೂಪಾಯಿ ನೋಟು ನೀಡಿ 300 ರೂಪಾಯಿಗೆ ಬೆಳ್ಳಿಯ ಆಭರಣ ಖರೀದಿಸಿ 200 ರೂಪಾಯಿ ವಾಪಸ್ಸು ಪಡೆದಿದ್ದಾರೆ. ನಂತರ 100 ರೂಪಾಯಿಗೆ ಚಿಲ್ಲರೆ ಕೊಡುವಂತೆ ಕೇಳಿ ಪಡೆದಿದ್ದಾರೆ. ನಂತರ ಕ್ಯಾಷ್ ಕೌಂಟರಿನಲ್ಲಿ ಕುಳಿತಿದ್ದರೂ 18 ಬಾರಿ ಒಳಗೆ ಕೈಹಾಕಿ ಡ್ರಾಗಳಿಂದ ಚಿನ್ನಾಭರಣಗಳನ್ನು ಹೊರತೆಗೆದು ಜೇಬಿಗೆ ಹಾಕಿಕೊಳ್ಳುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸಮಯದಲ್ಲಿ ಎಚ್ಚರ ತಪ್ಪಿಸುವ ರಾಸಾಯನಿಕ ಬಳಸಿರುವ ಪರಿಣಾಮವಾಗಿ ಪ್ರದೀಪ್ ಮಂಕಾಗಿ ಕುಳಿತಿದ್ದು ಯಾವುದೇ ಪ್ರತಿರೋಧ ತೋರಿಸಿಲ್ಲ ಎನ್ನಲಾಗಿದೆ. ಕಳ್ಳರು 30 ಸಾವಿರ ರೂಪಾಯಿ ನಗದು ಹಾಗೂ ಒಡವೆಗಳೊಡನೆ ಪರಾರಿಯಾಗಿದ್ದಾರೆ. ಬಹಳ ಹೊತ್ತಿನವರೆಗೂ ಮಂಕಾಗಿ ಕುಳಿತಿದ್ದ ಪ್ರದೀಪ್ ಎಚ್ಚರ ಬಂದಾಗ ಘಟನೆ ನಡೆದ ಬಗ್ಗೆ ಮನೆಯವರಿಗೆ ಮಾಹಿತಿ ನೀಡಿದ್ದಾನೆ. ನಂತರ ಹುಡುಕಾಡಿದರೂ ಕಳ್ಳರ ಪತ್ತೆಯಾಗಿಲ್ಲ.

ಘಟನೆಯಲ್ಲಿ 30 ಸಾವಿರ ರೂಪಾಯಿ ನಗದು ಹಾಗೂ 70 ಗ್ರಾಂ ಚಿನ್ನದ ಆಭರಣಗಳು ಕಳ್ಳತನವಾಗಿದೆ. ಈ ಬಗ್ಗೆ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಡಿಷನಲ್ ಎಸ್‌ಪಿ ಗೀತಾಪ್ರಸನ್ನ, ಡಿವೈಎಸ್‌ಪಿ ಎಸ್.ಇ.ಗಂಗಾಧರಸ್ವಾಮಿ ಹಾಗೂ ಸಿಪಿಐ ಕೆ.ವಿ.ಕೃಷ್ಣಪ್ಪ ಭೇಟಿ ನೀಡಿ ಸಿಸಿ ಟಿವಿಯ ವಿಡಿಯೋ ತುಣುಕುಗಳನ್ನು ಪಡೆದುಕೊಂಡು ಕಳ್ಳರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News