ಬೊಮ್ಮಲಾಪುರದಲ್ಲಿ ಜಿಲ್ಲಾಡಳಿತದಿಂದ ಶಾಂತಿ ಸಭೆ : ದುರ್ಘಟನೆ ತಡೆಯಲು ಬಿಗಿ ಬಂದೋ ಬಸ್ತ್

Update: 2017-06-16 12:58 GMT

ಗುಂಡ್ಲುಪೇಟೆ, ಜೂ.16: ಸಾಮಾಜಿಕ ಬಹಿಷ್ಕಾರದಿಂದ ಪ್ರಕ್ಷುಬ್ದವಾಗಿರುವ ತಾಲೂಕಿನ ಬೊಮ್ಮಲಾಪುರದಲ್ಲಿ ಜೂನ್ 17 ರಂದು ಶಾಂತಿ ಸಭೆ ಏರ್ಪಡಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದು, ದುರ್ಘಟನೆಗಳನ್ನು ತಡೆಯಲು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ಜೂನ್ 14ರಂದು ಗ್ರಾಮಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಮಣಿ ಬಾಯಿ ಭೇಟಿ ಸಂದರ್ಭದಲ್ಲಿ ಎರಡೂ ಗುಂಪುಗಳ ಜನರು ಕೈಕೈ ಮಿಲಾಯಿಸಿದ ಘಟನೆ ನಡೆದ ನಂತರ ಗ್ರಾಮದಲ್ಲಿ ಪರಿಸ್ಥಿತಿ ಇನ್ನೂ ಪ್ರಕ್ಷುಬ್ದವಾಗಿತ್ತು. ಬಹಿಷ್ಕಾರಕ್ಕೊಳಗಾಗಿದ್ದವರು ಗ್ರಾಮಕ್ಕೆ ಹಿಂದುರುಗಿದ ನಂತರ ಪರಿಸ್ಥಿತಿ ಉದ್ವಿಗ್ನವಾಗಿದ್ದು ಅಲ್ಲಲ್ಲಿ, ಮಾತಿನ ಚಕಮಕಿಗಳು ನಡೆದಿದ್ದವು.

ಇದನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸ್ ಬಲ ನಿಯೋಜಿಸಿದ ಪೊಲೀಸ್ ಜಿಲ್ಲಾ ವರಿಷ್ಟ ಧರಣೇಂದ್ರ ಕುಮಾರ್ ಮೀನಾ ಸಂಜೆ 7.30ರಲ್ಲಿ ಎರಡೂ ಕಡೆಯವರನ್ನು ಒಂದೆಡೆ ಸೇರಿಸಿ ಸಭೆ ನಡೆಸಿದರೂ ಯಾವುದೇ ಉಪಯೋಗವಾಗಿಲ್ಲ. ಆದ್ದರಿಂದ ನಾಯಕ ಜನಾಂಗದ ಸಂಪ್ರದಾಯದಂತೆ ತಾಲೂಕಿನ ಎಲ್ಲಾ ಗ್ರಾಮಗಳ ಮುಖಂಡರನ್ನೂ ಸಭೆಗೆ ಆಹ್ವಾನಿಸಿ 17ರ ಶನಿವಾರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಗ್ರಾಮದ ಮುಖಂಡರು ಹೇಳಿದ್ದಾರೆ.

ಸದ್ಯ ಗ್ರಾಮದಲ್ಲಿ ಹೆಚ್ಚಿನ ಜನರು ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಬಯಸುತ್ತಿದ್ದರೂ, ಪರಿಸ್ತಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಗ್ರಾಮಕ್ಕೆ ಯಾವುದೇ ವಾಹನ ಬಂದರೂ ಕುತೂಹಲದಿಂದ ಇಣುಕಿ ನೋಡುತ್ತಿದ್ದರೆ, ಅಕ್ಕಪಕ್ಕದವರ ಜೊತೆಗೂಡಿ ಮನೆಯ ಮುಂಭಾಗ ಕುಳಿತು ಮಾತನಾಡುತ್ತಾ ಮುಂದೇನಾಗಬಹುದು ಎಂದು ಚರ್ಚೆ ನಡೆಸುತ್ತಿದ್ದಾರೆ.

ಯಾವುದೇ ದುರ್ಘಟನೆಯನ್ನು ನಿಯಂತ್ರಿಸಲು ಗ್ರಾಮದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ, ಒಂದು ಜಿಲ್ಲಾ ಸಶತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಬೇಗೂರು ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ಹಾಗೂ ಪಟ್ಟಣದ ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ದಾಸಪ್ಪ ಗ್ರಾಮದಲ್ಲಿಯೇ ಬೀಡು ಬಿಟ್ಟಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News