ಉಡುಪಿಯ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುವುದಿಲ್ಲ: ಸಿ.ಎಂ. ಸಿದ್ದರಾಮಯ್ಯ

Update: 2017-06-16 16:03 GMT

ದಾವಣಗೆರೆ, ಜೂ. 16: ವಿಧಾನ ಪರಿಷತ್ ಸಭಾಪತಿ ವಿರುದ್ದದ ಅವಿಶ್ವಾಸ ನಿರ್ಣಯದಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡಿರುವುದು ಅವರ ಬಣ್ಣ ಮತ್ತೊಮ್ಮೆ ಬಯಲಾದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಶುಕ್ರವಾರ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಜನ್ಮದಿನದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿರುವ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಾತ್ಯಾತೀತ ಸಿದ್ದಾಂತದಂತೆ ನಡೆದುಕೊಳ್ಳುತ್ತೇವೆ ಎನ್ನುವ ಜೆಡಿಎಸ್ ನವರು ಇದೀಗ ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ. ಇದು ಜೆಡಿಎಸ್ ಪಕ್ಷದ ನಿಲುವು ಎಂದ ಅವರು ಜಾತ್ಯಾತೀತ ಪಕ್ಷಗಳು ಒಂದಾಗಿರಬೇಕೆಂಬ ಉದ್ದೇಶದಿಂದ ಜೆಡಿಎಸ್ ವರಿಷ್ಟರ ಜೊತೆ ಚರ್ಚೆ ನಡೆಸಲಾಗಿತ್ತು. ಜೆಡಿಎಸ್ ನವರು ಮೊದಲು ನಮಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದರು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಹ ಜೆಡಿಎಸ್ ವರಿಷ್ಟರೊಂದಿಗೆ ಮಾತನಾಡಿದ್ದರು. ಜಾತ್ಯಾತೀತ ನಿಲುವು ಹೊಂದಿರುವ ಜೆಡಿಎಸ್ ಪಕ್ಷ ನಮಗೆ ಬೆಂಬಲ ನೀಡುವ ವಿಶ್ವಾಸದಿಂದ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು. ಕೊನೆಗಳಿಗೆಯಲ್ಲಿ ಜೆಡಿಎಸ್ ನವರ ಬಣ್ಣ ಮತ್ತೊಮ್ಮೆ ಬಯಲಾಗಿದೆ ಎಂದರು.

ಜೂ.18 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಡುಪಿಗೆ ಭೇಟಿ ನೀಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಉಡುಪಿಯ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಉತ್ತರಿಸಿದರು.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸುವುದಕ್ಕೆ ತಾವು ಬದ್ಧರಾಗಿದ್ದು, ನೀವು ಜನರ ಪರವಾಗಿದ್ದೀರೋ, ಖಾಸಗಿ ಆಸ್ಪತ್ರೆಗಳ ಪರವೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರನ್ನೇ ಪ್ರಶ್ನಿಸಿದರು.

ರಾಜ್ಯದ ಖಾಸಗಿ ಆಸ್ಪತ್ರೆಗಳು ನೀಡುವ ವೈದ್ಯಕೀಯ ಚಿಕಿತ್ಸಾ ಶುಲ್ಕವನ್ನು ಸರ್ಕಾರವೇ ನಿಗದಿ ಮಾಡುವುದೂ ಸೇರಿದಂತೆ ಜನರ ದೂರು ಆಲಿಸಲು ಸಮಿತಿ ರಚನೆ ಸೇರಿದಂತೆ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸುವ ಉದ್ದೇಶವನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ಹೊಂದಿದ್ದು, ಇದನ್ನು ಜಾರಿಗೆ ತರುವುದಂತೂ ನಿಶ್ಚಿತ ಎಂದು ಅವರು ತಿಳಿಸಿದರು.

ಸಾರ್ವಜನಿಕರಿಗೆ ಅನುಕೂಲವಾಗಲೆಂದು ಇಂತಹದ್ದೊಂದು ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರಲು ತಮ್ಮ ಸರ್ಕಾರ ಮುಂದಾಗಿದ್ದು, ಇದು ಜನರ ಪರವಾಗಿರುವಂತಹ ಮಸೂದೆಯಾಗಿದೆ. ಎಲ್ಲಿಯೂ ವಿರೋಧವಾಗಿಲ್ಲ. ಇದು ಜನರಿಗೆ ಅನುಕೂಲ ಕಲ್ಪಿಸುವಂತಹ ಮಸೂದೆ ಯಾಗಿದೆ ಎಂದು ಅವರು ಹೇಳಿದರು.

ದಾವಣಗೆರೆಯಲ್ಲೂ ಈ ತಿದ್ದುಪಡಿ ಮಸೂದೆಗೆ ವಿರೋಧವಾಗಿಲ್ಲ ಅನಿಸುತ್ತದೆಯಲ್ವಾ ಎಂದು ಸಿದ್ದರಾಮಯ್ಯ ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಪ್ರಶ್ನಿಸಿದಾಗ ಹೌದು ಎಂಬ ಉತ್ತರ ವ್ಯಕ್ತವಾಯಿತು. ಇದರಿಂದ ಮತ್ತಷ್ಟು ಉತ್ತೇಜಿತರಾದ ಸಿಎಂ, ನೀವು(ಮಾಧ್ಯಮಗಳು) ಜನರ ಪರವಾಗಿದ್ದೀರೋ, ಖಾಸಗಿ ಆಸ್ಪತ್ರೆಗಳ ಪರವೋ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಲೋಕೋಪಯೋಗಿ ಸಚಿವ ಮಹಾದೇವಪ್ಪ, ಮೇಯರ್ ಅನಿತಾಬಾಯಿ, ಉಪಮೇಯರ್ ಮಂಜುಳಮ್ಮ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ, ಜಿ.ಪಂ ಸದಸ್ಯ ಬಸವಂತಪ್ಪ, ಮಾಜಿ ಸಚಿವ ಕೆ.ಮಲ್ಲಪ್ಪ, ಪುಷ್ಪ ಲಕ್ಷ್ಮಣಸ್ವಾಮಿ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಸಿಇಓ ಅಶ್ವತಿ, ಸಲೀಂ ಅಹ್ಮದ್, ಎಸ್ಪಿ ಭೀಮಾಶಂಕರ್ ಎಸ್ ಗುಳೇದ್, ತಹಶೀಲ್ದಾರ್ ಸಂತೋಷ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News