ಇರಾಕ್‌ನಿಂದ ಐಸಿಸ್ ಅಪಹರಿಸಿದ ಭಾರತೀಯರಿಗೆ ಶೋಧ

Update: 2017-06-17 04:28 GMT

ಹೊಸದಿಲ್ಲಿ, ಜೂ. 17: ಮೂರು ವರ್ಷ ಹಿಂದೆ ಇರಾಕ್‌ನಿಂದ ನಾಪತ್ತೆಯಾದ 39 ಮಂದಿ ಭಾರತೀಯರ ಶೋಧದಲ್ಲಿ ಸಹಕರಿಸಬಹುದಾದ ರಾಷ್ಟ್ರಗಳ ಜತೆ ಭಾರತ ನಿರಂತರ ಸಂಪರ್ಕದಲ್ಲಿದೆ ಎಂದು ಸರ್ಕಾರ ಪ್ರಕಟಿಸಿದೆ. 2014ರಲ್ಲಿ ಇವರನ್ನು ಐಸಿಸ್ ಉಗ್ರರು ಅಪಹರಿಸಿರಬೇಕು ಎಂದು ಶಂಕಿಸಲಾಗಿದೆ.

ಈ ಕುರಿತ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಗೋಪಾಲ್ ಬಗ್ಲೆ, "ಈ ತಿಂಗಳ ಆರಂಭದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಈ ಕುಟುಂಬಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದಾರೆ" ಎಂದು ವಿವರಣೆ ನೀಡಿದರು.

"ಭಾರತಕ್ಕೆ ಶೋಧ ಕಾರ್ಯದಲ್ಲಿ ನೆರವಾಗುವ ಎಲ್ಲ ದೇಶಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಎಲ್ಲರೂ ಜೀವಂತವಿದ್ದಾರೆ ಎಂಬ ಮಾಹಿತಿ ಇದೆ. ಅವರು ಮೃತಪಟ್ಟಿದ್ದಾರೆ ಎಂದು ಸಾಬೀತುಪಡಿಸುವ ಯಾವುದೇ ಮಾಹಿತಿ ಇಲ್ಲ" ಎಂದು ಬಗ್ಲೆ ಸ್ಪಷ್ಟಪಡಿಸಿದ್ದಾರೆ.

ಅಪಹರಣಕ್ಕೆ ಒಳಗಾದ ಈ ಮಂದಿ 2014ರ ಜೂನ್ 14ರಂದು ಕೊನೆಯದಾಗಿ ಕರೆ ಮಾಡಿದ್ದಾಗಿ ಕುಟುಂಬಗಳು ಹೇಳಿವೆ. ನಮ್ಮನ್ನು ಐಸಿಸ್ ಉಗ್ರರು ಅಪಹರಿಸಿದ್ದಾಗಿ ಅವರು ತಿಳಿಸಿದ್ದರು ಎಂದು ಕುಟುಂಬಸ್ಥರು ವಿವರಿಸಿದ್ದಾಗಿ ಬಗ್ಲೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News