×
Ad

ಕೃಷಿ ವಿವಿ ಪ್ರಾಧ್ಯಾಪಕರು ಪಾಠದ ಜತೆ ಗದ್ದೆಗಳಲ್ಲಿಯೂ ಕೆಲಸ ಮಾಡಬೇಕು : ಕಾಗೋಡು ತಿಮ್ಮಪ್ಪ

Update: 2017-06-17 17:23 IST

ಶಿವಮೊಗ್ಗ, ಜೂ. 17: ’ಕೃಷಿ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರು ಪಾಠ ಮಾಡುವುದರ ಜೊತೆಗೆ ಕೃಷಿ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಹೊಂದಿರಬೇಕು. ಕೃಷಿ ಜಮೀನುಗಳಿಗೆ ತೆರಳಿ ಬೆಳೆಗಳ ಪ್ರಯೋಗ ನಡೆಸಬೇಕು’ ಎಂದು ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

ಮಣ್ಣು ಹೇಗಿರಬೇಕು, ಎಷ್ಟು ಆಳ ಉಳುಮೆ ಮಾಡಬೇಕು,  ಬೀಜ ಬಿತ್ತುವುದು ಹೇಗೆಂಬುವುದನ್ನು ತಿಳಿದುಕೊಂಡು ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದ ಅವರು, ’ಕೃಷಿ ವಿವಿ ಪ್ರಾಧ್ಯಾಪಕರು ಒಳ್ಳೆ ಪಾಠ ಮಾಡುತ್ತಾರೆ. ಆದರೆ ಗದ್ದೆ ನಾಟಿ ಮಾಡುವುದಾಗಲಿ ಅಥವಾ ನೇಗಿಲು ಹಿಡಿಯುವುದಾಗಲಿ ಗೊತ್ತಿರುವುದಿಲ್ಲ’ ಎಂದು ಹೇಳಿದರು.

ಕೃಷಿ ನಮ್ಮ ಬದುಕಾಗಿದ್ದು, ಕೃಷಿ ವಿವಿಯು ಈ ಭಾಗದ ರೈತರಿಗೆ ಬೆಳಕಾಗಿ ಕಾರ್ಯನಿರ್ವಹಣೆ ಮಾಡಬೇಕು. ಸೂಕ್ತ ಮಾರ್ಗದರ್ಶನ ನೀಡುವ ತಾಣವಾಗಬೇಕು. ರೈತರು ಈ ವಿವಿಗೆ ಬರುವಂತಾಗಬೇಕು. ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ವಿವಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.

ಕೃಷಿ ವಿವಿ ಕೃಷಿಕರಿಗೆ ಶಾಲೆ ಇದ್ದಂತೆ. ರೈತರಿಗೆ ಹೊಸ ತಳಿ ಬೀಜ ಸಂಶೋಧನೆ ಮಾಡಿ ಸಾಂಪ್ರದಾಯಿಕ ಬೀಜಗಳನ್ನು ಪುನಃ ಸಂಶೋಧಿಸುವ ಕೆಲಸ ಮಾಡಬೇಕು. ಇದರಲ್ಲೇ ನಾವು ಏನನ್ನಾದರೂ ಸಾಧಿಸಬೇಕು. ಈ ಕೆಲಸ ವಿವಿಯಿಂದ ಆಗಬೇಕು. ಕೃಷಿಗೆ ಹೊಸ ಆಯಾಮ ಸಿಗಬೇಕು. ರೈತರಿಗೆ ಹೊಸ ಸಂಸ್ಕೃತಿ ನೀಡಬೇಕು. ಹಾಗೆಯೇ ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ರೈತರು ಕೂಡ ತಮ್ಮ ವೈಖರಿ ಬದಲಾಯಿಸಿಕೊಳ್ಳಬೇಕಾಗಿದೆ ಎಂದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News