×
Ad

ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಬಿಡುಗಡೆಗೊಳಿಸದಿರುವುದು ವಿಷಾದನೀಯ: ಅಬ್ದುಲ್ ಮಜೀದ್

Update: 2017-06-18 15:17 IST

ಚಿಕ್ಕಮಗಳೂರು, ಜೂ.18: 2015ರಲ್ಲಿ ರಾಜ್ಯ ಸರಕಾರ ರಾಜ್ಯದಾದ್ಯಂತ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವಾಸ್ತವಾಂಶವನ್ನು ತಿಳಿಯುವ ಉದ್ದೇಶದೊಂದಿಗೆ ಮಹಾತ್ವಕಾಂಶವುಳ್ಳ ಜಾತಿಗಣತಿ ಸಮೀಕ್ಷೆ ನಡೆಸಿದೆಯಾದರೂ ಬಿಡುಗಡೆಗೊಳಿಸದಿರುವುದು ವಿಷಾದನೀಯ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ತಿಳಿಸಿದ್ದಾರೆ.

ಅವರು ಭಾನುವಾರ ಈ ಕುರಿತು ಹೇಳಿಕೆ ನೀಡಿದ್ದು, ಈ ಸಮೀಕ್ಷೆಯ ವರದಿಗೆ ಅನುಸಾರವಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ರೂಪಿಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರವು ನೂರಾರು ಕೋಟಿ ಖರ್ಚು ಮಾಡಿದೆ. ಆದರೆ ಜಾತಿ ಗಣತಿ ಸಮೀಕ್ಷೆಯ ವರದಿ ಮಾತ್ರ ಇಲ್ಲಿಯವರೆಗೆ ಸಾರ್ವಜನಿಕವಾಗಿ ಬಿಡುಗಡೆಯಾಗದಿರುವುದು ವಿಷಾದನೀಯ ಎಂದು ಹೇಳಿದ್ದಾರೆ.


ಕಳೆದ ಬೆಳಗಾವಿ ಅಧಿವೇಶನದಲ್ಲಿ ಸ್ವಯಂ ಮುಖ್ಯಮಂತ್ರಿಗಳೇ ಡಿಸೆಂಬರ್ ತಿಂಗಳಿನಲ್ಲಿ ಜಾತಿಗಣತಿ ಸಮೀಕ್ಷೆಯ ವರದಿಯನ್ನು ಬಹಿರಂಗಗೊಳಿಸುವುದಾಗಿ ಅಂದಿನ ಸದನಕ್ಕೆ ಆಶ್ವಾಸನೆ ನೀಡಿದರು. ಆದಾದ ನಂತರ ಮಾನ್ಯ ಸಮಾಜ ಕಲ್ಯಾಣ ಸಚಿವರನ್ನು ಒಳಗೊಂಡಂತೆ ಸರ್ಕಾರ ಹಲವು ಬಾರಿ ಸಾರ್ವಜನಿಕವಾಗಿ ಶೀಘ್ರದಲ್ಲೇ ಜಾತಿಗಣತಿ ಸಮೀಕ್ಷೆಯ ವರದಿ ಬಹಿರಂಗ ಪಡಿಸುವುದಾಗಿ ಘೋಷಿಸಿಕೊಂಡಿದ್ದರೂ ಸಹ ಇಲ್ಲಿಯವರೆಗೂ ವರದಿ ಮಾತ್ರ ಬಹಿರಂಗಗೊಂಡಿಲ್ಲ.

ಈ ಸಂಬಂಧ ಮುಖ್ಯಮಂತ್ರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕರ್ನಾಟಕದ ಜನರಿಗೆ ಕೊಟ್ಟ ಮಾತನ್ನು ಉಳಿಸಿ ತಕ್ಷಣ ಜಾತಿ ಗಣತಿ ವರದಿಯನ್ನು ಬಹಿರಂಗಪಡಿಸಿ ಹಿಂದುಳಿದ ವರ್ಗಗಳ ಸರ್ವೋತೋಮುಖ ಅಭಿವೃದ್ಧಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News