ಕೆಐಎಡಿಬಿ ಭೂಸ್ವಾಧಿನ ಆದೇಶ ರದ್ದು ಮಾಡಿದ ಶಾಸಕ ಬಿ.ಸುರೇಶಗೌಡ
ತುಮಕೂರು.ಜೂ.18: ಬಡ ರೈತರು ಹಲವಾರು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು, ಸರಕಾರಕ್ಕೆ ಭೂ ಮಂಜುರಾತಿಗಾಗಿ ಫಾರಂ 50-53 ರಲ್ಲಿ ಅರ್ಜಿ ಸಲ್ಲಿಸಿರುವ ಸರಕಾರಿ ಭೂಮಿಯನ್ನು ಕೆ.ಐ.ಎ.ಡಿ.ಬಿ ಭೂ ಸ್ವಾಧೀನ ಮಾಡಿಕೊಳ್ಳದಂತೆ ಶಾಸಕ ಬಿ.ಸುರೇಶ್‌ಗೌಡ ಆದೇಶ ನೀಡಿದ್ದಾರೆ.
ತುಮಕೂರು ತಹಶೀಲ್ದಾರರ ಕಚೇರಿಯಲ್ಲಿ ನಡೆದ ಬಗರ್‌ಹುಕ್ಕು ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡುವ ಸಂಬಂಧ ಕೆರೆದಿರುವ ಸಾಗುವಳಿ ಸಕ್ರಮಿಕರಣ ಸಭೆಯಲ್ಲಿ ಕೆ.ಐ.ಎ.ಡಿ.ಬಿ. ಭೂ ಸ್ವಾಧೀನ ಪಡಿಸಿಕೊಂಡಿರುವುದನ್ನು ರದ್ದು ಪಡಿರದಲ್ಲದೆ,ರೈತರಿಗೆ ಖಾತೆ ಮಾಡಿಕೊಡುವಂತೆ ಸ್ಪಷ್ಟ ನಿರ್ದೇಶನವನ್ನು ನೀಡಿ, ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಭೂಮಿ ರೈತರಿಗೆ ದೊರೆಯುವಂತೆ ಮಾಡಿದ್ದಾರೆ.
ಸರಕಾರದ ಗೆಜೆಟ್‌ನಲ್ಲಿ ಇಲ್ಲದೆ ಇದ್ದರೂ ಕೂಡಾ ಅರಣ್ಯ ಇಲಾಖೆಯವರು ಖಾಲಿ ಇರುವ ಕಡೆಯಲ್ಲಿ ಎಲ್ಲ ಗಿಡ ಹಾಕಿಕೊಂಡು ನಮ್ಮದೆ ಜಮೀನು ಎಂದು ರೈತರಿಗೆ ಮೋಸ ಮಾಡುತ್ತಿರುವ ಅರಣ್ಯ ಇಲಾಖೆಯ ವಿರುದ್ದ ಹರಿಹಾಯ್ದ ಶಾಸಕರು, ಅರಣ್ಯ ಇಲಾಖೆ ತನ್ನದು ಎಂದು ಹೇಳುತ್ತಿರುವ ಜಮೀನಿನಲ್ಲಿ ರೈತರು ಅನಾದಿಕಾಲದಿಂದಲೂ ವ್ಯವಸಾಯ ಮಾಡುತ್ತಿದ್ದು, ಮೊದಲು ರೈತರಿಗೆ ಭೂಮಿ ಮಂಜೂರು ಮಾಡಿ ಎಂದು ಅಧಿಕಾರಿಗಳಿಗೆ ಆದೇಶ ನೀಡಿದರು.
ಸಾಗುವಳಿ ಚೀಟಿ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸಿ ಇಲ್ಲದ ಸಬೂಬು ಹೇಳಿಕೊಂಡು ಹಲವು ವರ್ಷಗಳಿಂದ ಸತಾಯಿಸುತ್ತಿದ್ದಾರೆ.ಸರಕಾರದ ಕಾನೂನುಗಳನ್ನು ತೋರಿಸಿ ರೈತರಿಗೆ ಸಾಗುವಳಿ ಚೀಟಿ ನೀಡಲು ವಿಳಂಬ ಮಾಡಲು ಪ್ರಯತ್ನಿಸಿದ್ದೇ ಆದರೆ ಅಂತಹವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಬಿ.ಸುರೇಶಗೌಡ ಎಚ್ಚರಿಕೆ ನೀಡಿದರು.
1975 ರಿಂದಲೂ ಅನುಭವಿಸಿಕೊಂಡು ಬರುತ್ತಿರುವ ರೈತರಿಗೆ ಸಾಗುವಳಿ ಚೀಟಿ ಇದ್ದರೂ ಕೂಡಾ ದುರಸ್ಥಿ ಆಗದೆ ಇಂದಿಗೂ ಕೂಡಾ ಸಕ್ರಮವಾಗಿಲ್ಲ.ಇದು ಅಕ್ಷಮ್ಯ ಅಪರಾಧವಾಗಿದೆ, ಅಧಿಕಾರಿಗಳು ನಿಗಧಿತ ಕಾಲಮಿತಿಯಲ್ಲಿ ದುರಸ್ಥಿ ಮಾಡಿದ್ದರೆ ರೈತರು ಅಧಿಕಾರಿಗಳ ಮತ್ತು ರಾಜಕಾರಣಿಗಳ ಮನೆ ಬಾಗಿಲಿಗೆ ಅಲೆಯುವಂತ ಸ್ಥಿತಿ ಇರುತ್ತಿರಲಿಲ್ಲ. ಸೋರೇಕುಂಟೆ ಗ್ರಾಮದ ರೈತರಿಗೆ ಬಗರಹುಕುಂ ಸಾಗುವಳಿ ಸಮಿತಿಯಲ್ಲಿ 1977-88, 1981-82, 1991-1992 ರಲ್ಲಿ 110 ರೈತರಿಗೆ ಜಮೀನು ಮೂಂಜೂರಾಗಿದ್ದು,ಸಾಗುವಳಿ ಚೀಟಿ ಇದ್ದರೂ ಕೂಡಾ ತಹಸಿಲ್ದಾರ್ ಕಛೇರಿಯಲ್ಲಿ ನೈಜತೆ ಪ್ರಮಾಣಪತ್ರ ನೀಡುವಲ್ಲಿ ವಿನಾ ಕಾರಣ ವಿಳಂಬ ಮಾಡುತ್ತಿರುವುದೂ ಅಲ್ಲದೆ ರೇಕಾರ್ಡರೂಂ ನಲ್ಲಿ ದಾಖಲೆ ಲಭ್ಯತೆ ಇರುವುದಿಲ್ಲ ಎಂದು ಹಿಂಬರಹ ನೀಡುತ್ತಿರುವುದನ್ನು ಖಂಡನೀಯ.ರೈತರ ಬಳಿ ದಾಖಲೆ ಇರುವುದೇನು?, ಕಚೇರಿಯಲ್ಲಿ ಇಲ್ಲದೆ ಇರುವುದೇನು? ಎಂಬುದನ್ನು ಪ್ರಶ್ನಿಸಿದ ಶಾಸಕರು,ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಕಾರ್ಯದರ್ಶಿ ತಹಸಿಲ್ದಾರ್ ರಂಗೇಗೌಡ,ಉಪ ತಹಸಿಲ್ದಾರ್ ನರಸಿಂಹರಾಜು,ಗುಮಾಸ್ಥ ಗುರುದೇವಪ್ಪ ಉಪಸ್ಥಿತರಿದ್ದರು.