×
Ad

ಪಂಚಾಯತ್ ಅಧಿಕಾರಿಗಳ ವಿಳಂಬ ನೀತಿ: ಮಹಿಳಾ ಸಂಘದ ಅಧ್ಯಕ್ಷೆ ಖಂಡನೆ

Update: 2017-06-18 18:35 IST

ಕುಶಾಲನಗರ, ಜೂ.18: ಮುಳ್ಳುಸೋಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾರಂಗಿ ರಸ್ತೆಯಲ್ಲಿ ಹೊಸದಾಗಿ ಕಟ್ಟಿಕೊಂಡಿರುವ ಮನೆಗೆ ವಿದ್ಯುತ್ ಸಂಪರ್ಕ ಕ್ಕಾಗಿ ಎನ್‌ಒಸಿ ನೀಡಲು ಪಂ. ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಫಲಾನುಭವಿ ಶೋಭಾ ದೂರಿದ್ದಾರೆ.

ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನೆಡೆಸಿದ ಅವರು, ಹಾರಂಗಿ ರಸ್ತೆಯಲ್ಲಿ ಚರ್ಚ್‌ಗೆ ಸೇರಿದ ಜಾಗವಿದ್ದು, ಈ ಜಾಗದಲ್ಲಿ ಗುತ್ತಿಗೆ ಪಡೆದು ಕಳೆದ 10 ವರ್ಷಗಳಿಂದ ಕೃಷಿ ಮಾಡಿಕೊಂಡು ಜಾಗವನ್ನು ಭೂಗಳ್ಳರು ಒತ್ತುವರಿ ಮಾಡದಂತೆ ಎಚ್ಚರಿಕೆಯಿಂದ ನೋಡಿಕೊಂಡ ಹಿನ್ನೆಲೆಯಲ್ಲಿ ಚರ್ಚ್‌ನ ಫಾದರ್ ಜೋಸೆಫ್ ಅವರು 10 ಸೆಂಟ್ ಜಾಗವನ್ನು ನಮ್ಮ ಕುಟುಂಬಕ್ಕೆ ಧಾನವಾಗಿ ನೀಡಿದ್ದಾರೆ.

ಈ ಜಾಗದಲ್ಲಿ ನಾವು ಮನೆಯನ್ನು ನಿರ್ಮಿಸಿಕೊಂಡಿದ್ದು, ನಮಗೆ ವಿದ್ಯುತ್ ಸಂಕರ್ಪಕ್ಕಾಗಿ ಎನ್‌ಒಸಿ ಕೇಳಲು ಪಂ.ಗೆ ಹೋದರೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರೊಬ್ಬರು 10 ಸೆಂಟ್ ಜಾಗದಲ್ಲಿ 5 ಸೆಂಟ್ ಜಾಗವನ್ನು ನನ್ನ ಹೆಸರಿಗೆ ಬರೆದುಕೊಟ್ಟರೆ ಮಾತ್ರ ನಿಮಗೆ ಎನ್‌ಒಸಿ ನೀಡುತ್ತೇವೆ ಎಂದು ಹೇಳಿದರು. ಅದೇ ರೀತಿ ಪಂ.ನ ಮಹಿಳಾ ಸದಸ್ಯೆ ಕೂಡ ನಿಮಗೆ ಎನ್‌ಒಸಿ ಬೇಕಾದರೆ 10 ಸಾವಿರ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ್ದಾರೆ. ನಾವು ಇವರ ಬೇಡಿಕೆಯನ್ನು ಒಪ್ಪದೆ ಇದ್ದುದರಿಂದ ಎನ್ಒಸಿ ನಮಗೆ ದೊರಕದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಾವು ಬಡವರು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಇವರಿಗೆ ಎಲ್ಲಿಂದ ಹಣ ನೀಡುವುದು ಅಲ್ಲದೆ ನಿಮಗೆ ಧಾನವಾಗಿ ಕೊಟ್ಟ ಜಾಗದಲ್ಲಿ ನಮಗೂ ಪಾಲು ಕೊಡಿ ಎಂದು ಚುನಾಯಿತ ಸದಸ್ಯರು ಕೇಳುವುದು ನ್ಯಾಯವೇ ಎಂದು ಕಣ್ಣಿರು ಹಾಕುತ್ತಾ, ಎನ್‌ಒಸಿ ನೀಡದಿದ್ದರೆ ಪಂಚಾಯತ್ ಕಚೇರಿ ಮುಂದೆ ಕುಟುಂಬ ಸದಸ್ಯರೆಲ್ಲ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಭಾರ್ಗವಿ ಮಹಿಳಾ ಸಂಘದ ಅಧ್ಯಕ್ಷೆ ಹೆಲನ್ ಮೆಟಲ್ಡಾ ಮಾತನಾಡಿ, ಬಡವರು ಹೊಸದಾಗಿ ಕಟ್ಟಿಕೊಂಡಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಳ್ಳುಸೋಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ವಿನಃ ಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ಅಲ್ಲದೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಕೂಡ ಬಡವರ್ಗದ ಜನರು ಎಂದು ನೋಡದೆ ಜಾಗವನ್ನು ಕೇಳುತ್ತಿರುವುದು ಸರಿಯಲ್ಲ. ಬಡವರ ಪರ ಮುಖವಾಡ ಹಾಕಿಕೊಂಡಿರುವ ಪಾತ್ರಧಾರಿ ಎಂದರು.
ಇದೇ ರೀತಿ ಬಡವರ್ಗದ ಜನರಿಗೆ ನಿರಂತರ ತೊಂದರೆ ನೀಡುತ್ತಿರುವ ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಚುನಾಯಿತಿ ಜನಪ್ರತಿನಿಧಿಗಳ ಕ್ರಮವನ್ನು ಖಂಡಿಸಿ ಜೂ. 28ರಂದು ಪಂ. ಕಚೇರಿ ಮುಂದೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಭಾಗ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News