ಜಾತ್ಯತೀತತೆ ಬಗ್ಗೆ ಕಾಂಗ್ರೆಸ್‌ನವರಿಂದ ಕಲಿಯಬೇಕಾಗಿಲ್ಲ:ಎಚ್ಡಿಕೆ

Update: 2017-06-18 14:43 GMT

ಮಂಡ್ಯ, ಜೂ.18: ವಿಧಾನಪರಿಷತ್ ಸಭಾಪತಿ ವಿರುದ್ಧ ಕಾಂಗ್ರೆಸ್ ಮಂಡಿಸಿದ ಅವಿಶ್ವಾಸ ನಿರ್ಣಯ ಸಂಬಂಧ ತನ್ನ ಪಕ್ಷ ಬಿಜೆಪಿ ಬೆಂಬಲಿಸಿರುವುದನ್ನು ಸಮರ್ಥಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜಾತ್ಯತೀತ ಮನೋಭಾವ ಉಳಿಸಿಕೊಳ್ಳುವ ರೀತಿಯನ್ನು ಕಾಂಗ್ರೆಸ್‌ನವರಿಂದ ಕಲಿಯಬೇಕಾಗಿಲ್ಲವೆಂದು ಎದುರೇಟು ನೀಡಿದ್ದಾರೆ.

ತಾಲೂಕಿನ ಬಸರಾಳು ಗ್ರಾಮದಲ್ಲಿ ರವಿವಾರ ತಾಯಮ್ಮ ಮತ್ತು ರಾಮೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ, ರೈತರಿಗೆ ತೆಂಗಿನ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ನ ತೆಗೆದುಕೊಳ್ಳುವ ಪ್ರತಿಯೊಂದು ತೀರ್ಮಾನಕ್ಕೂ ಕೈಎತ್ತಲು ನಾವೇನು ಅವರ ಗುಲಾಮರಲ್ಲ, ಹೆಬ್ಬೆಟ್ಟಿನ ಜನರೂ ಅಲ್ಲ. ಜೆಡಿಎಸ್-ಬಿಜೆಪಿ ನಡುವೆ ಮೂರು ವರ್ಷದ ಹಿಂದೆ ಆಗಿದ್ದ ಒಪ್ಪಂದದಂತೆ ಬಿಜೆಪಿ ಬೆಂಬಲಿಸಿದ್ದೇವೆ. ಆದರೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ನಾವು ಸಮರ ನಡೆಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿಗೆ ಬೆಂಬಲ ನೀಡಿದ ಜೆಡಿಎಸ್ ಪಕ್ಷದ ಜಾತ್ಯತೀತ ನಿಲುವಿನ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಜಾತ್ಯತೀತ ಒಲವು ಹಾಗೂ ಸಿದ್ಧಾಂತಗಳನ್ನು ತಮ್ಮ ಅಧಿಕಾರದಲ್ಲಿ ಯಾವ ರೀತಿ ಅಳವಡಿಸಿಕೊಂಡಿದ್ದಾರೆ ಎನ್ನುವುದನ್ನು ಒಮ್ಮೆ ಅವರು ಪ್ರಶ್ನಿಸಿಕೊಳ್ಳಲಿ ಎಂದು ಅವರು ತಿರುಗೇಟು ನೀಡಿದರು.

ಜೆಡಿಎಸ್ ಪಕ್ಷ ಅಧಿಕಾರದಲ್ಲಿರಲಿ, ಇಲ್ಲದಿರಲಿ ಜಾತ್ಯತೀತ ಸಿದ್ಧಾಂತ, ಭಾವನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುವ ನೂರಾರು ನಿದರ್ಶನಗಳಿವೆ. ಅದನ್ನು ಉಳಿಸಿಕೊಳ್ಳುವುದೂ ಗೊತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿವಾದಿ ಎಂಬುದಕ್ಕೆ ಹಲವಾರು ನಿರ್ದರ್ಶನ ಕೊಡಬಲ್ಲೆ ಎಂದೂ ಅವರು ಸವಾಲು ಹಾಕಿದರು.

ತನ್ನ ಪಕ್ಷದ ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಎಂ.ಶ್ರೀನಿವಾಸ್ ಭೂಕಬಳಿಗೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬೆಂಗಳೂರಿನಲ್ಲಿ ಆಗಿರುವ ಭೂಕಬಳಿಕೆ ಮುಂದೆ ಮಂಡ್ಯದ ಮುಡಾ ನಿವೇಶನ ಕಬಳಿಕೆ ಪ್ರಕರಣದ ಏನೇನೂ ಅಲ್ಲ. ಸರಕಾರಕ್ಕೆ ಇಚ್ಚಾಸಕ್ತಿ ಇದ್ದರೆ ಬೆಂಗಳೂರಿನ ಅರ್ಕಾವತಿ ಬಡಾವಣೆ ಡಿನೊಟಿಫಿಕೇಷನ್ ಬಗ್ಗೆ ಸರಿಯಾಗಿ ತನಿಖೆ ನಡೆಸಲಿ ಎಂದರು.

ಮಂಡ್ಯ ಕೆರೆಯಂಗಳದಲ್ಲಿ ನಿವೇಶನಗಳನ್ನು ಹರಾಜು ಹಾಕಿದರೂ ತೆಗೆದುಕೊಳ್ಳುವವರೇ ಇರಲಿಲ್ಲ. ಆನಂತರದಲ್ಲಿ ಕೆರೆಯಂಗಳದಲ್ಲಿ ಸುಂದರ ಬಡಾವಣೆ ನಿರ್ಮಿಸುವ ಸಲುವಾಗಿ ನಿವೇಶನಗಳನ್ನು ಬೇಕಾದವರಿಗೆಲ್ಲಾ ಹಂಚಿಕೆ ಮಾಡಲಾಯಿತು. ನಿವೇಶನಗಳನ್ನು ಹಂಚಿಕೆ ಮಾಡುವಾಗ ಕೆಲವು ವ್ಯತ್ಯಾಸಗಳಾಗಿರಬಹುದು ಎಂದು ಅವರು ಹೇಳಿಕೊಂಡರು.
ಶ್ರೀರಂಗಪಟ್ಟಣದಲ್ಲಿ ಸದ್ಯದಲ್ಲೇ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆ ನಡೆಸಲಿದ್ದೇವೆ. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಸಮರ್ಥ, ಗೆಲ್ಲುವ ಅಭ್ಯರ್ಥಿಯನ್ನು ಮುಂದಿನ ಚುನಾವಣೆಗೆ ಆಯ್ಕೆ ಮಾಡುತ್ತೇವೆ. ಕಾರ್ಯಕರ್ತರು ವಿಚಲಿತರಾಗಬಾರದು ಎಂದು ಅವರು ಮನವಿ ಮಾಡಿದರು.

ರೈತರ ಮೇಲೆ ಗೋಲಿಬಾರ್‌ಗೆ ಆಕ್ರೋಶ: ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಪ್ರತಿಭಟನಾನಿರತ ರೈತರ ಮೇಲೆ ಮಧ್ಯಪ್ರದೇಶ ಸರಕಾರ ಗೋಲಿಬಾರ್ ಮಾಡಿಸಿದೆ. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಿದ್ದರೂ ರೈತರ ಬೆಳೆಗಳಿಗೆ ಉತ್ತಮ ದರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೀನಾಮೇಷ ಎಣಿಸುತ್ತಿವೆ. ದೇಶದಲ್ಲಿ ಎರಡು ವರ್ಷದಲ್ಲಿ ಸುಮಾರು 3 ಸಾವಿರ, ಮಂಡ್ಯ ಜಿಲ್ಲೆಯಲ್ಲಿ 150 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ತಡೆಯಲು ಕೇಂದ್ರ, ರಾಜ್ಯ ಸರಕಾರಗಳು ಕಾರ್ಯಕ್ರಮ ರೂಪಿಸಿಲ್ಲ ಎಂದು ಅವರು ಕಿಡಿಕಾರಿದರು.

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‌ಗಳ ರೈತರ ಸಾಲವನ್ನು ಸಂಪೂರ್ಣ ಮನ್ನಾಮಾಡುವುದರ ಜತೆಗೆ, ಮತ್ತೆ ರೈತರ ಮೇಲೆ ಸಾಲದ ಹೊರಬೀಳದಂತೆ ಕಾರ್ಯಕ್ರಮ ರೂಪಿಸಲಾಗುವುದು. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಹಾದಿಹಿಡಿಯಬಾರದು ಎಂದು ವರು ಭರವಸೆ ನೀಡಿದರು.

ಶಾಸಕರಾದ ಡಿ.ಸಿ.ತಮ್ಮಣ್ಣ, ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಎಚ್.ಡಿ.ಚೌಡಯ್ಯ, ಜಿ.ಬಿ.ಶಿವಕುಮಾರ್, ಕೆ.ಸುರೇಶ್‌ಗೌಡ, ಎಲ್.ಆರ್. ಶಿವರಾಮೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ರೈತಸಂಘದ ಮುಖಂಡ ಕೆ.ಎಸ್.ನಂಜುಂಡೇಗೌಡ, ಟ್ರಸ್ಟ್ ಅಧ್ಯಕ್ಷ ಮುದ್ದನಘಟ್ಟ ಮಹಾಲಿಂಗೇಗೌಡ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News