ಸೊರಬ: ಡಾ.ನಡಹಳ್ಳಿ ರಂಗನಾಥಶರ್ಮ ಜನ್ಮ ಶತಾಬ್ದಿ ಕಾರ್ಯಕ್ರಮ

Update: 2017-06-19 12:39 GMT

ಸೊರಬ,ಜೂ.19: ಪ್ರಾಚೀನ ಹಾಗೂ ಆಧುನಿಕ ಕನ್ನಡ ಸಾಹಿತ್ಯಕ್ಕೆ ಸೇತುವೆಯಾಗಿ ಡಾ.ನಡಹಳ್ಳಿ ರಂಗನಾಥಶರ್ಮಾ ಅವರು ಸಾಹಿತ್ಯ ಕೃಷಿ ಮಾಡಿದವರು ಎಂದು ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.

ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿದ್ವಾಂಸ ಡಾ.ನಡಹಳ್ಳಿ ರಂಗನಾಥಶರ್ಮ ಅವರ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದ ಶರ್ಮರು. ಈ ಎರಡು ಭಾಷೆಗಳ ವ್ಯಾಕರಣದ ವಿಚಾರದಲ್ಲಿ ಅವರಿಗೆ ಅಪ್ರತಿಮ ವೈದಿಗ್ಧ್ಯವಿತ್ತು. ಇವರು ಹಲವಾರು ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ ಹಾಗೂ ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಪ್ರಾಚೀನ ಕಾಲದಿಂದಲೂ ಭಾರತೀಯ ಭೌಗೋಳಿಕ ಭಾಷೆಯ ಮೇಲೆ ಪ್ರಭುತ್ವವನ್ನು ಹೊಂದಿದ್ದ ಸಂಸ್ಕೃತವು ಸಹಜವಾಗಿ ಪ್ರತಿಯೊಂದು ಭಾಷಾ ವಿದ್ವಾಂಸರನ್ನು ತನ್ನಡೆಗೆ ಸೆಳೆದುಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಪ್ರಾಚೀನ ವಿದ್ವಾಂಸರ ಜೊತೆ ಸ್ನೇಹ ಇಟ್ಟುಕೊಂಡಿದ್ದ ಶರ್ಮಾ ಅವರು ಕನ್ನಡ ಆಧುನಿಕ ಸಾಹಿತ್ಯದ ಹಿರಿಮೆಯನ್ನು ಸಂಸ್ಕೃತಕ್ಕೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಕನ್ನಡ ಸಾಹಿತ್ಯದ ಬಗೆಗಿನ ಒಲುವು, ಕಾಳಜಿ ಹೊಂದಿದ್ದ ಶರ್ಮಾ ಅವರು, ಅಪಾರ ಸಂಸ್ಕೃತ ಪಾಂಡಿತ್ಯವನ್ನು ಹೊಂದಿದ್ದರೂ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ ನಾಡು,ನುಡಿಯ ಹಿರಿಮೆಯನ್ನು ಎತ್ತಿ ಹಿಡಿದವರು. ಮಲೆನಾಡಿನ ತಣ್ಣನೆಯ ಅನುಭವದ ಜೊತೆಗೆ ಸಾಹಿತ್ಯವನ್ನು ಗಟ್ಟಿಗೊಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಡಿವಿಜಿ. ತೀ.ನಂ.ಶ್ರೀ, ಪುತಿನ, ದ.ರಾ.ಬೇಂದ್ರೆ, ಜೊತೆ ಅವಿನಾಭ ಸಂಬಂಧ ಹೊಂದಿದ್ದರು ಎಂದು ಸ್ಮರಿಸಿದರು.

ಡಾ.ನಡಹಳ್ಳಿ ರಂಗನಾಥಶರ್ಮಾ ಅವರು ರಚಿಸಿದ ರಂಗ ವಾಲ್ಮೀಕಿ ರಾಮಾಯಣ ಹಾಗೂ ರಂಗ ಸಂಸ್ಕೃತ ಸಾಹಿತ್ಯ ಕುರಿತು ವಿಚಾರಗೋಷ್ಠಿ ನಡೆಸಲಾಯಿತು.ಸೀತರಾಮ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಹಾದಿಗಲ್ಲು ಲಕ್ಷ್ಮೀನಾರಾಯಣ ಪ್ರಾಸ್ತಾವಿಕ ಮಾತನಾಡಿದರು.

ಶಾರದಾ, ಟಿ.ಎನ್.ಪ್ರಭಾಕರ, ಎಂ.ಎ.ಹೆಗಡೆ, ನಾರಾಯಣ ಶೆವಿರೆ, ಜಯಶ್ರೀ, ಕೃಷ್ಣಮೂರ್ತಿ ಶಾನುಭೋಗ, ಲಕ್ಷ್ಮಣಪ್ಪ, ಲಕ್ಷ್ಮೀ ಮುರಳಿಧರ್, ಪಾಣಿ ರಾಜಪ್ಪ, ಮಂಜಪ್ಪ, ಸದಾನಂದ, ರಘುನಂದನ ಭಟ್ ಮತ್ತಿತರರು ಹಾಜರಿದ್ದರು.ಶ್ರೀಪಾದ ಬಿಚ್ಚುಗತ್ತಿ ಸ್ವಾಗತಿಸಿ, ಹಾಲೇಶ್ ನವುಲೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News