×
Ad

ಜಾತಿಗಣತಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ನಿರ್ಧಾರ; ಎಚ್.ಆಂಜನೇಯ

Update: 2017-06-19 18:20 IST

ದಾವಣಗೆರೆ, ಜೂ.19: ಜಾತಿ ಜನಗಣತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಬಿಡುಗಡೆಗೆ ಯಾವುದೇ ರೀತಿಯ ಅಡ್ಡಿ, ಆತಂಕ, ಒತ್ತಡಇಲ್ಲ. ಇದು ಸಾಮಾಜಿಕ ನ್ಯಾಯವಾಗಿದ್ದು, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಬೇಕಾಗಿದೆ. ಈಗಾಗಲೇ ಸದನದಲ್ಲಿಯೂ ಪ್ರತಿ ಪಕ್ಷಗಳು, ದಲಿತ ಮುಖಂಡರು ಜಾತಿ ಜನಗಣತಿ ಬಿಡುಗಡೆ ಒತ್ತಾಯಿಸುತ್ತಿದ್ದು, ಅದಷ್ಟು ಬೇಗ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದರು.
ಎಸ್ಸಿ, ಎಸ್ಟಿ ಜನ ಅತ್ಯಂತ ಕಡುಬಡತನ ಹೊಂದಿದ್ದು, ಅವರಿಗೆ 50 ಲಕ್ಷದವರೆಗೂ ಗುತ್ತಿಗೆನೀಡುವುದಕ್ಕೆ ಎರಡು ಸದನಗಳಲ್ಲಿ ಒಪ್ಪಿಗೆ ಪಡೆದು ಈಗ ರಾಷ್ಟ್ರಪತಿ ಬಳಿ ಅಂಕಿತಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ನಗರಸಭೆ, ಪುರಸಭೆ, ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 10 ಸಾವಿರ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಿಕೊಳ್ಳಲಾಗುವುದು. ಉಳಿದ ಪೌರ ಕಾರ್ಮಿಕರಿಗೆ ವೇತನವನ್ನು ಆರ್‌ಟಿಜಿಎಸ್ ಮೂಲಕ ನೀಡಲಾಗುತ್ತದೆ. ನಗರಸಭೆ, ಪುರಸಭೆಯಲ್ಲಿ 6 ಸಾವಿರ, ಪಾಲಿಕೆಯಲ್ಲಿ 4 ಸಾವಿರ ಕಾರ್ಮಿಕರ ಹುದ್ದೆ ಖಾಲಿ ಇದ್ದು, ಈ ಬಗ್ಗೆ ಜೂ.20ರಂದು ಪೌರ ಕಾರ್ಮಿಕರ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಳು ಸಭೆ ಕರೆಯಲಾಗಿದೆ. ಅಲ್ಲದೆ,ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಹೋಗಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭ ರಾಜ್ಯ ರೇಷ್ಮೆಮಂಡಳಿ ಮಾಜಿ ಅಧ್ಯಕ್ಷ ಡಿ.ಬಸವರಾಜ್, ದೂಡಾ ಅಧ್ಯಕ್ಷ ರಾಮಚಂದ್ರಪ್ಪ, ರಾಜ್ಯ ಮಾವು ಮಾರಾಟ ಮಂಡಳಿ ಉಪಾಧ್ಯಕ್ಷ ಪಿ.ರಾಜಕುಮಾರ್, ಸಮಾಜ ಕಲ್ಯಾಣ ಜಿಲ್ಲಾಧಿಕಾರಿ ಕುಮಾರ್ ಹನುಮಂತಪ್ಪ, ಪರಿಶಿಷ್ಟ ಪಂಗಡ ಇಲಾಖೆ ಜಿಲ್ಲಾ ಅಧಿಕಾರಿ ದೇವೇಂದ್ರಪ್ಪ, ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ಗಂಗಪ್ಪ, ದೇವರಾಜು ಅರಸುನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್ ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News