ಬಂಡೀಪುರ ಬಳಿ ಬೈಕ್ ಢಿಕ್ಕಿ, ವ್ಯಕ್ತಿ ಸಾವು: ಬೈಕ್ ಭಸ್ಮ
ಗುಂಡ್ಲುಪೇಟೆ,ಜೂ.19: ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಯುವಕನೋರ್ವ ಸಾವನಪ್ಪಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಮದ್ದೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಢಿಕ್ಕಿಯ ರಭಸಕ್ಕೆ ಚಾಲನೆ ಮಾಡುತ್ತಿದ್ದ ಬುಲೆಟ್ ಬೈಕ್ ಹೊತ್ತಿ ಉರಿದಿದೆ.
ಜೂನ್ 18ರ ಸಂಜೆ ನಡೆದ ಘಟನೆಯಲ್ಲಿ ಬೆಂಗಳೂರಿನ ವಿನೋಬನಗರದ ನಿವಾಸಿ ಆನಂದರಮಣ (32) ಅಪಘಾತದಲ್ಲಿ ಸಾವನಪ್ಪಿದ ದುರ್ದೈವಿಯಾಗಿದ್ದಾರೆ. ಇವರು ಸ್ನೇಹಿತರೊಂದಿಗೆ ವಾರಾಂತ್ಯದ ಹಿನ್ನೆಲೆಯಲ್ಲಿ ಕೇರಳದ ವಯನಾಡು ಮತ್ತು ಎಡಕಲ್ಲು ಗುಡ್ಡವನ್ನು ನೋಡಿಕೊಂಡು ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದಾಗ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೊಳಪಡುವ ಮದ್ದೂರು ಅರಣ್ಯಪ್ರದೇಶದ ಕ್ಯಾಲಿಕಟ್ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ.
ಆನಂದರಮಣ ಬೆಂಗಳೂರಿನ ಮಾಲ್‌ವೊಂದರಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತನ್ನ ಸ್ನೇಹಿತರೊಂದಿಗೆ ಶನಿವಾರ ಬೆಂಗಳೂರು ಬಿಟ್ಟು ಕೇರಳ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದರು. ನಂತರ ಭಾನುವಾರ ವಾಪಸ್ ಊರಿಗೆ ತೆರಳುತ್ತಿದ್ದಾಗ ಗುಂಡ್ಲುಪೇಟೆಯಿಂದ ಕೇರಳ ಕಡೆಗೆ ಹೋಗುತ್ತಿದ್ದ ರಾಜಸ್ಥಾನ ಮೂಲದ ಗೂಡ್ಸ್ ತುಂಬಿದ ಲಾರಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಬೈಕ್ ಚಾಲನೆ ಮಾಡುತ್ತಿದ್ದ ಆನಂದರಮಣ ನೆಲಕ್ಕೆ ಬಿದ್ದಾಗ ತಲೆ ಹಾಗೂ ಕೈಗೆ ಬಲವಾದ ಗಾಯವಾಗಿದೆ. ನಂತರ ತುರ್ತುವಾಹನದಲ್ಲಿ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತರುವಷ್ಟರಲ್ಲಿ ಮಾರ್ಗ ಮಧ್ಯೆ ಸಾವನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬೈಕ್‌ನ ಇಂಧನ ಸೋರಿಕೆಯಾದ ಕಾರಣ ಬೈಕ್ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಘಟನೆ ನಂತರ ಲಾರಿ ಚಾಲಕ ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ, ಸಬ್ ಇನ್ಸ್‌ಪೆಕ್ಟರ್ ಶಿವರುದ್ರಪ್ಪ, ಸಹಾಯಕ ಸಬ್‌ಇನ್ಸ್‌ಪೆಕ್ಟರ್ ನಟರಾಜು ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.