ಜೆಎಸ್‌ಎಸ್ ಅಸ್ಪತ್ರೆಗೆ ಸಂಸದರಿಂದ ಅಂಬುಲೆನ್ಸ್ ಕೊಡುಗೆ
ಚಾಮರಾಜನಗರ, ಜೂ.19: ಜಿಲ್ಲಾ ಕೇಂದ್ರದಲ್ಲಿ ನೂತನವಾಗಿ ಆರಂಭವಾಗಿರುವ ಜೆಎಸ್‌ಎಸ್ ಅಸ್ಪತ್ರೆಗೆ ಸಂಸದ ಆರ್. ಧ್ರುವನಾರಾಯಣ್ ಅವರು ಲೋಕಾಸಭಾ ಕ್ಷೇತ್ರದ ಪ್ರದೇಶಾಭಿವೃದ್ದಿ ನಿಧಿಯಿಂದ 16.50 ಲಕ್ಷ ರೂ. ವೆಚ್ಚದ ಸುಸಜ್ಜಿತ ಆಂಬ್ಯುಲೆನ್ಸ್ ನೀಡಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜೆಎಸ್‌ಎಸ್ ಆಸ್ಪತ್ರೆಯ ಮುಂಭಾಗ ನೂತನ ಆಂಬ್ಯುಲೆನ್ಸ್‌ಗೆ ಸೋಮವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಜೆಎಸ್‌ಎಸ್ ಮಹಾವಿದ್ಯಾಪೀಠ ಮೈಸೂರಿನಲ್ಲಿ ದೊಡ್ಡ ಆಸ್ಪತ್ರೆಯನ್ನು ನಿರ್ವಹಣೆ ಮಾಡುತ್ತಿದೆ. ಅದೇ ರೀತಿ ಜಿಲ್ಲೆಯ ಅಭಿವೃದ್ದಿ ದೃಷ್ಟಿಯಿಂದ ಚಾ.ನಗರ ಜಿಲ್ಲೆಯಲ್ಲಿಯೂ ಸಹ ಜೆಎಸ್‌ಎಸ್ ಅಸ್ಪತ್ರೆ ನಿರ್ಮಾಣವಾಗಬೇಕು ಎಂದು ಪೂಜ್ಯ ಸ್ವಾಮೀಜಿಗಳಲ್ಲಿ ಮನವಿ ಮಾಡಿಕೊಂಡಿದ್ದೆ. ಅದರಂತೆ ಸ್ವಾಮೀಜಿಗಳು ಜಿಲ್ಲೆಯ ಜನರ ಸೇವೆಗಾಗಿ ಜೆಎಸ್‌ಎಸ್ ಅಸ್ಪತ್ರೆಯನ್ನು ನಿರ್ಮಾಣ ಮಾಡಿ, ಕಳೆದ ತಿಂಗಳು ಮುಖ್ಯಮಂತ್ರಿಗಳಿಂದ ಅಸ್ಪತ್ರೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸದರ ನಿಧಿಯಿಂದ ಅಂಬ್ಯುಲೆನ್ಸ್ ನೀಡುವಂತೆ ಸಂಸ್ಥೆಯಿಂದ ಮನವಿ ಮಾಡಿಕೊಂಡಿರು. ಸಂಸದರ ನಿಧಿಯಿಂದ ಸುಸಜ್ಜಿತ, ಹವಾನಿಯಂತ್ರಿತ ವಾಹನವನ್ನು ಕೊಡುಗೆ ನೀಡಿಲಾಗಿದೆ. ಮೈಸೂರಿನಲ್ಲಿ ಕೆ.ಆರ್. ಅಸ್ಪತ್ರೆ ಜೊತೆಗೆ ಜೆಎಸ್‌ಎಸ್ ಅಸ್ಪತ್ರೆಯು ಉತ್ತಮ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಆದೇ ಮಾದರಿಯಲ್ಲಿ ಚಾ.ನಗರದಲ್ಲಿಯೂ ಜೆ ಎಸ್‌ಎಸ್ ಆಸ್ಪತ್ರೆ ಸೇವೆ ಅವಶ್ಯಕತೆ ಇತ್ತು. ಸ್ವಾಮೀಜಿಗಳು ನಮ್ಮ ಮನವಿಯಂತೆ ಅಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಅಂಬ್ಯುಲೆನ್ಸ್ ಸಹ ನೀಡಿದ್ದು, ಜಿಲ್ಲೆಯ ಜನತೆ ಆರೋಗ್ಯ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಧ್ರುವನಾರಾಯಣ್ ಮನವಿ ಮಾಡಿದರು.
ಜೆಎಸ್‌ಎಸ್ ಸಂಸ್ಥೆಯ ಆಢಳಿತಾಧಿಕಾರಿ ಬೆಟ್ಟಸೂರು ಮಠ್ ಸಂಸದರಿಂದ ವಾಹನದ ಕೀ ಸ್ವೀಕರಿಸಿ ಮಾತನಾಡಿ, ಸಂಸದರು ಜೆಎಸ್‌ಎಸ್ ಸಂಸ್ಥೆಯ ಬಗ್ಗೆ ಹೆಚ್ಚಿನ ಅಭಿಮಾನ ಮತ್ತು ಪ್ರೀತಿಯನ್ನುಟ್ಟು ತಮ್ಮ ನಿಧಿಯಿಂದ ಸುಸಜ್ಜಿತ ಅಂಬ್ಯುಲೆನ್ಸ್ ನೀಡಿದ್ದಾರೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಪ್ರಗತಿಯಿಂದ ಮಾತ್ರ ಜಿಲ್ಲೆ ಅಭಿವೃದ್ದಿ ಸಾಧ್ಯ ಎಂಬ ಕಾಳಜಿಯನ್ನು ಹೊಂದಿದ್ದಾರೆ. ಅವರ ನಿರೀಕ್ಷೆಯಂತೆ ಚಾ.ನಗರ ಜಿಲ್ಲೆಯಲ್ಲಿಯೂ ಉತ್ತಮ ಆರೋಗ್ಯ ಸೇವೆಯನ್ನು ನೀಡಲು ಸಂಸ್ಥೆ ಶ್ರಮ ವಹಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷ ರಾಮಚಂದ್ರು, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ರಾಜ್ಯ ಕಾರ್ಮಿಕರ ಸಲಹಾ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ, ತಾ.ಪಂ. ಅಧ್ಯಕ್ಷ ಹೊಂಗನೂರುಚಂದ್ರು, ಜಿ.ಪಂ. ಸದಸ್ಯ ಕೆ.ಪಿ. ಸದಾಶಿವಮೂರ್ತಿ, ಜಿಲ್ಲಾಧಿಕಾರಿ ಬಿ. ರಾಮು, ಡಿಎಚ್‌ಓ ಡಾ. ಪ್ರಸಾದ್, ಜೆಎಸ್‌ಎಸ್ ಅಸ್ಪತ್ರೆಯ ಅಧೀಕ್ಷಕ ಡಾ. ಮಹೇಶ್, ಸೂಪರಡೆಂಟ್ ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಚುಡಾ ಮಾಜಿ ಅಧ್ಯಕ್ಷ ಸೈಯದ್‌ರಫಿ, ಬ್ಲಾಕ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ಶಂಭಪ್ಪ ಮೊದಲಾದವರು ಇದ್ದರು.