ಅಪರಿಚಿತ ವ್ಯಕ್ತಿಯಿಂದ ಮಹಿಳೆ ಮೇಲೆ ಅತ್ಯಾಚಾರ
ನಾಗಮಂಗಲ, ಜೂ.19: ಅಪರಿಚಿತ ವ್ಯಕ್ತಿಯೋರ್ವನಿಂದ ಅತ್ಯಾಚಾರಕ್ಕೊಳಗಾದ ಆಘಾತದಿಂದ ದಲಿತ ಮಹಿಳೆ ಅರೆಪ್ರಜ್ಞಾವಸ್ಥೆಗೆ ತಲುಪಿದ್ದು, ಚಿಕಿತ್ಸೆಗಾಗಿ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮಾವಾರ ನಡೆದಿದೆ.
ತಾಲೂಕಿನ ಬೆಳ್ಳೂರು ಹೋಬಳಿಯ ಸಿದ್ದಾಪುರ ಪಾಳ್ಯದ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದು, ಈಕೆ ಆರಣಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‌ಗೆ ಬಂದು ವಾಪಸ್ ಮನೆಗೆ ತೆರಳಲು ಆಟೋರಿಕ್ಷಕ್ಕೆ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅಲ್ಲಿಗೆ ಬೈಕ್‌ನಲ್ಲಿ ಬಂದ ಅಪರಿಚಿತ, ಆಕೆಯನ್ನು ಡ್ರಾಪ್ ಮಾಡುವ ನೆಪದಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಪರಾರಿಯಾದ ಎನ್ನಲಾಗಿದೆ. ನಂತರ, ಆಕೆ ಸಾರ್ವಜನಿಕರ ಸಹಾಯದಿಂದ ಚುಂಚನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾದಳು ಎಂದು ತಿಳಿದು ಬಂದಿದೆ.
ತೀವ್ರ ರಕ್ತಸ್ರಾವದಿಂದ ಬಸವಳಿದಿದ್ದ ಮಹಿಳೆಯನ್ನು ಚುಂಚನಹಳ್ಳಿ ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬಿಜಿನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಿದ್ದು, ಅರೆಪ್ರಜ್ಞಾವಸ್ಥೆಯಲ್ಲಿರುವ ಆಕೆಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆ ಪೊಲೀಸರು ತಿಳಿಸಿದ್ದಾರೆ.