ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ: ಸಂಚಾರಿಗಳಲ್ಲಿ ಭೀತಿ
ಮೂಡಿಗೆರೆ, ಜೂ.19: ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ರಸ್ತೆಯ ಮಧ್ಯ ಭಾಗದಲ್ಲಿ ಸೋಮವಾರ ಸಂಜೆ ಕಾಡಾನೆ ಕ್ಷಣಾರ್ಧದಲ್ಲಿ ಪ್ರತ್ಯಕ್ಷವಾಗಿ ವಾಹನ ಸವಾರರು ಭಯಭೀತರಾದ ಘಟನೆ ನಡೆದಿದೆ.
ಚಾಮಾಡಿ ಘಾಟ್‌ನ 11ನೇ ತಿರುವಿನಲ್ಲಿ ಸೋಮವಾರ ಸಂಜೆ ರಸ್ತೆಯಲ್ಲಿಯೇ ನಿಂತ ಕಾಡಾನೆಯನ್ನು ಕಂಡು ಪ್ರವಾಸಿಗರು ವಾಹನ ಸವಾರರು ಭಯಗೊಂಡು ವಾಹನವನ್ನು ತುಸು ಅಂತರದಲ್ಲೇ ನಿಲ್ಲಿಸಿ ಜೀವ ಭಯದಿಂ ತತ್ತರಿಸಿದ್ದರು. ಕಾಡಾನೆಯೂ ಎರಡು ಬದಿಯಲ್ಲಿ ವಾಹನವನ್ನು ದ್ವಂಸಗೊಳಿಸುತ್ತದೆಯೋ ಎಂದು ಯೋಚಿಸಿದರೆ ಕೆಲವರು ಪ್ರಾಣದ ಹಂಗು ತೊರೆದು ವಾಹನದಲ್ಲೇ ಸುಮಾರು 15 ನಿಮಿಷ ಕಾದು ನಿಂತರು. ಆದರೆ ಕಾಡಾನೆ ಯಾರಿಗೂ ತೊಂದರೆ ಕೊಡದೇ ರಸ್ತೆಯಿಂದ ಕಾಡಿಗೆ ಸಾಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಾಹನದಲ್ಲಿ ಸಾಗುತ್ತಿದ್ದ ಪ್ರವಾಸಿಗರು ಬದುಕಿದೆಯೇ ಬಡಜೀವ ಎಂಬಂತೆ ಕಾಡಾನೆ ಸಾಗಿದ ಮೇಲೆ ಅಲ್ಲಿಂದ ವಾಹನ ಚಲಾಯಿಸಿ ಮುನ್ನಡೆದರು. ಕೊಟ್ಟಿಗೆಹಾರದಿಂದ ಉಜಿರೆ ಕಡೆಗೆ ಸಾಗುತ್ತಿದ್ದ ಕೊಟ್ಟಿಗೆಹಾರ ನಿವಾಸಿ ಕುಂಜಿಮೋಣು ಬೆಳಿಗ್ಗೆ 10ನೇ ತಿರುವಿನಲ್ಲಿ ಕಾಡಾನೆಯ ಕೂಗು ಕೇಳಿ ವಾಹನವನ್ನು ವೇಗವಾಹಗಿ ಚಲಾಯಿಸಿ ಉಜಿರೆ ಸೇರಿದ್ದಾರೆ. ತದ ನಂತರ ಸಂಜೆ ಕೊಟ್ಟಿಗೆಹಾರಕ್ಕೆ ವಾಪಾಸ್ ಬರುವಾಗ 11ನೇ ತಿರುವಿನಲ್ಲಿ ರಸ್ತೆಯಲ್ಲೇ ನಿಂತ ಕಾಡಾನೆಯಿಂದ ಅವರ ವಾಹನವು ಪವಾಡ ದೃಶ್ಯವಾಗಿ ಕೂದಲೆಳೆ ಅಂತರದಲ್ಲಿ ಕಾಡಾನೆಯ ಸನಿಹದಿಂದ ಪಾರಾಯಿತು ಎಂದು ಪ್ರತ್ಯಕ್ಷಧರ್ಶಿ ಕುಂಙಿಮೋಣು ತಿಳಿಸಿದ್ದಾರೆ.
ಕಾಡಾನೆ ಸ್ಥಳಾಂತರಕ್ಕೆ ಒತ್ತಾಯ:
ಬಣಕಲ್, ಚಕ್ಕಮಕ್ಕಿ, ಬಗ್ಗಸಗೋಡು, ಕೊಟ್ಟಿಗೆಹಾರ, ಆಲೇಖಾನ್, ಬಿದಿರುತಳ ಸುತ್ತಮುತ್ತ ಕಾಡಾನೆಗಳು ಊರಿಗೆ ಬರುತ್ತಿದ್ದು ಬೆಳೆ ಹಾನಿ ಸಂಭವಿಸುತ್ತಿರುವುದು ಇತ್ತೀಚೆಗೆ ವರದಿಯಾಗಿತ್ತು. ಅರಣ್ಯ ಇಲಾಖೆಯವರು ಬೇರೆ ಆನೆಯನ್ನು ಹಿಡಿದು ಪುಂಡಾಟಿಕೆ ಮಾಡುವ ಆನೆಯನ್ನು ಹಿಡಿಯದೇ ಜನರನ್ನು ಸಂಕಷ್ಟಕ್ಕೆ ಈಡು ಮಾಡಿದ್ದಾರೆ.
ಎರಡು ಮೂರು ಆನೆಗಳಿರುವ ಹಿಂಡು ಆಗಾಗ ಊರಿಗೆ ಬಂದು ದಾಂದಲೇ ನಡೆಸುವುದಲ್ಲದೇ ಸಂಚರಿಸುವ ರಸ್ತೆಗಳಿಗೂ ಅಪಾಯವನ್ನು ತಂದೊಡ್ಡಿದೆ.ಸಂಬಂಧ ಪಟ್ಟ ಅರಣ್ಯ ಅಧಿಕಾರಿಗಳು ಈ ಭಾಗದಲ್ಲಿದಾಂಧಲೇ ನಡೆಸುತ್ತಿರುವ ಆನೆಗಳನ್ನು ಸ್ಥಳಾಂತರಿಸಿ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂದು ಕೊಟ್ಟಿಗೆಹಾರದ ಸಂಜಯ್‌ಗೌಡ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.