ಕೋವಿಂದ್ ಎಂಬ ಬಿಜೆಪಿಯ ಗುರಾಣಿ

Update: 2017-06-19 18:30 GMT

ಒಬ್ಬ ಮನುಷ್ಯ ತನ್ನ ಮುಷ್ಟಿಯೊಳಗೆ ಹಕ್ಕಿಯನ್ನು ಬಚ್ಚಿಟ್ಟುಕೊಂಡು ‘‘ನನ್ನ ಮುಷ್ಟಿಯೊಳಗಿರುವ ಹಕ್ಕಿ ಸತ್ತಿದೆಯೋ, ಬದುಕಿದೆಯೋ?’’ ಎಂದು ಕೇಳುತ್ತಾನೆ. ಬದುಕಿದೆ ಎಂದು ಹೇಳಿದರೆ ಹಕ್ಕಿಯನ್ನು ಮುಷ್ಟಿಯೊಳಗೇ ಸಾಯಿಸಿ ‘‘ನೋಡಿ, ಸತ್ತಿದೆ’’ ಎಂದು ಮೀಸೆ ತಿರುವುತ್ತಾನೆ. ‘‘ಸತ್ತಿದೆ’’ ಎಂದರೆ ಹಕ್ಕಿಯನ್ನು ಜೀವಂತ ಹಾರಲು ಬಿಟ್ಟು ‘‘ನೋಡಿ ನಿಮ್ಮ ಮಾತು ಸುಳ್ಳಾಯಿತು, ಹಕ್ಕಿ ಬದುಕಿದೆ’’ ಎಂದು ಮೀಸೆ ತಿರುವುತ್ತಾನೆ. ಈವರೆಗೆ ರಾಷ್ಟ್ರಪತಿ ಅಭ್ಯರ್ಥಿಯ ಹೆಸರನ್ನು ಮುಷ್ಟಿಯೊಳಗಿಟ್ಟುಕೊಂಡು ವಿವಿಧ ಪಕ್ಷಗಳ ಬೆಂಬಲ ಕೋರುತ್ತಿದ್ದ ಬಿಜೆಪಿಯ ವರ್ತನೆ ಇದಕ್ಕಿಂತ ಭಿನ್ನವೇನೂ ಇದ್ದಿರಲಿಲ್ಲ.

ಅಭ್ಯರ್ಥಿಯ ಹೆಸರನ್ನು ಬಹಿರಂಗ ಪಡಿಸದೆಯೇ ವಿವಿಧ ಪಕ್ಷಗಳ ನಾಯಕರ ಮುಂದೆ ‘ಬೆಂಬಲ ಯಾಚನೆ’ಯ ಪ್ರಹಸನವೇ, ಬಿಜೆಪಿಯ ದುರುದ್ದೇಶವನ್ನು ಸಾರುತ್ತಿತ್ತು. ‘ಮೋದಿ ಹೇಳಿದ ಹೆಸರನ್ನು ಒಪ್ಪಿಕೊಳ್ಳಬೇಕು’ ಎನ್ನುವ ಬಿಜೆಪಿ ನಾಯಕರ ಪ್ರಸ್ತಾವವೇ ಪ್ರಜಾಸತ್ತೆಗೆ ವಿರೋಧಿಯಾದುದು. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳೂ ಋಣಾತ್ಮಕವಾಗಿಯೇ ಸ್ಪಂದಿಸಿದ್ದವು. ಜಾತ್ಯತೀತ ಹಿನ್ನೆಲೆಯಿರುವ ಒಬ್ಬ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿ, ಎಲ್ಲ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅವಕಾಶ ಬಿಜೆಪಿಗಿತ್ತು. ಆದರೆ ಅಂತಹದೊಂದು ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ಸೂಚಿಸುವ ಇರಾದೆಯೇ ತನಗಿಲ್ಲ ಎನ್ನುವುದು ಆರಂಭದ ಅದರ ನಡೆಯಲ್ಲೇ ಸ್ಪಷ್ಟವಾಗಿತ್ತು.

ಶಿವಸೇನೆಯೂ ಸೇರಿದಂತೆ ವಿರೋಧ ಪಕ್ಷಗಳು ರಾಷ್ಟ್ರಪತಿ ಸ್ಥಾನಕ್ಕೆ ಸಂಬಂಧಿಸಿ ತಮ್ಮ ತಮ್ಮ ನಿಲುವಿಗೆ ಕಟು ಬದ್ಧವಾಗಿರುವುದನ್ನು ಗಮನಿಸಿದ ಬಿಜೆಪಿ ಕೊನೆಯ ಕ್ಷಣದಲ್ಲಿ ತನ್ನ ತಂತ್ರವನ್ನು ಬದಲಿಸಿದೆ. ತಮ್ಮ ಎದುರಾಳಿಗಳ ವಿರುದ್ಧ ‘ದಲಿತ’ ಹಿನ್ನೆಲೆಯನ್ನು ಗುರಾಣಿಯನ್ನಾಗಿ ಮಾಡಿಕೊಂಡು ಆರೆಸ್ಸೆಸ್‌ನ ವ್ಯಕ್ತಿಯನ್ನು ರಾಷ್ಟ್ರಪತಿಯನ್ನಾಗಿಸಲು ಹೊರಟಿದೆ. ಕನಿಷ್ಠ ಬಿಜೆಪಿಯ ರಾಜಕೀಯ ತಂತ್ರದ ಭಾಗವಾಗಿಯಾದರೂ ಒಬ್ಬ ದಲಿತ ಸಮುದಾಯದಿಂದ ಬಂದ ನಾಯಕನನ್ನು ಬಿಜೆಪಿ ರಾಷ್ಟ್ರಪತಿಯನ್ನಾಗಿಸಲು ಹೊರಟಿದೆಯಲ್ಲ ಎಂಬ ಸಂತೋಷದ ಜೊತೆ ಜೊತೆಗೇ, ರಾಷ್ಟ್ರಪತಿಯಾಗಿ ಕೋವಿಂದ್ ಎಷ್ಟರಮಟ್ಟಿಗೆ ಶೋಷಿತರ ಪರವಾಗಿ ಸರಕಾರವನ್ನು ತಿದ್ದಬಲ್ಲರು, ಪ್ರಜಾಸತ್ತೆಯನ್ನು ಎತ್ತಿ ಹಿಡಿಯಬಲ್ಲರು ಎಂಬ ಅನುಮಾನವನ್ನು ನಾವು ವ್ಯಕ್ತಪಡಿಸಬೇಕಾಗಿದೆ.

1977ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿಯವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಕೋವಿಂದ್, ಅಖಿಲ ಭಾರತ ಕೋಲಿ ಸಮಾಜದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. 2012ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಕೋವಿಂದ್‌ರನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶದ ದಲಿತರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡಿತ್ತು. ಬಿಜೆಪಿಯ ಹಿರಿಯ ನಾಯಕರಾದ ರಾಜನಾಥ್ ಸಿಂಗ್ ಬಳಗದಲ್ಲಿ ಗುರುತಿಸಿಕೊಂಡಿರುವ ಕೋವಿಂದ್ ಅವರನ್ನು ಬೆಳೆಯದಂತೆ ನೋಡಿಕೊಳ್ಳಲು ಬಿಜೆಪಿಯೊಳಗೇ ಇರುವ ಹಿಂದುಳಿದ ವರ್ಗದ ನಾಯಕರು ಉತ್ತರ ಪ್ರದೇಶದಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದರು.

ಇವೆಲ್ಲವನ್ನೂ ಮೀರಿ, ಕೋವಿಂದ್ ಅವರನ್ನು ಬಿಹಾರದ ಗವರ್ನರ್ ಹುದ್ದೆ ಅರಸಿಕೊಂಡು ಬಂದಿದ್ದರೆ ಅದಕ್ಕೆ ಅವರು ದಲಿತರಾಗಿದ್ದು ಮಾತ್ರ ಕಾರಣವಲ್ಲ. ಯಾವತ್ತೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಅಭ್ಯಾಸವಿಲ್ಲದ, ದಲಿತರ ಹಕ್ಕುಗಳಿಗಾಗಿ ಪಕ್ಷದೊಳಗೆ ಎಂದೂ ಜೋರಾಗಿ ಧ್ವನಿಯೆತ್ತದ, ಬಿಜೆಪಿಯ ನಾಯಕರ ಮಾತಿಗೆ ಸದಾ ತಲೆದೂಗುತ್ತಾ, ಅವರ ತಾಳಕ್ಕೆ ತಕ್ಕಂತೆಯೇ ಕುಣಿಯಬಲ್ಲ ಎಲ್ಲ ಯೋಗ್ಯತೆಗಳಿರುವ ಕಾರಣಕ್ಕಾಗಿ ಕೋವಿಂದ್‌ರನ್ನು ಅಂತಿಮವಾಗಿ ಅನಿವಾರ್ಯ ಎನ್ನುವ ಸ್ಥಿತಿಯಲ್ಲಿ ಗವರ್ನರ್ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಿತ್ತು. ಇಂದು ರಾಷ್ಟ್ರಪತಿ ಹುದ್ದೆಗೆ ಅವರು ಆಯ್ಕೆಯಾಗುತ್ತಿರುವುದೂ ಅದೇ ಅರ್ಹತೆಯಲ್ಲಿ.

ಒಂದು ಹಂತದಲ್ಲಿ ಇದು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ‘ಎಪಿಜೆ ಅಬ್ದುಲ್ ಕಲಾಂ’ ಅವರನ್ನು ಮುಂದಿಟ್ಟು ಆಡಿದ ರಾಜಕೀಯ ಚದುರಂಗದಾಟವನ್ನು ನೆನಪಿಸುತ್ತದೆ. ಆದರೆ ಅಂದಿಗೂ ಇಂದಿಗೂ ಅಜಗಜಾಂತರವಿದೆ. ಒಂದು, ಆಗ ಬಿಜೆಪಿ ಇಷ್ಟೊಂದು ಬಹುಮತವನ್ನು ತನ್ನದಾಗಿಸಿಕೊಂಡಿರಲಿಲ್ಲ. ಇದೇ ಸಂದರ್ಭದಲ್ಲಿ ಕಲಾಂ ಅವರು ಯಾವೊಂದು ಪಕ್ಷ, ಸಿದ್ಧಾಂತದಿಂದ ಹೊರಬಂದವರೂ ಆಗಿರಲಿಲ್ಲ. ರಾಜಕೀಯ ಅನುಭವವಿಲ್ಲದೇ ಇದ್ದರೂ, ಸಾಕಷ್ಟು ಸದ್ ಚಿಂತನೆಗಳನ್ನು ಮೈಗೂಡಿಸಿಕೊಂಡ ವಿಜ್ಞಾನಿಯಾಗಿದ್ದರು ಅವರು. ಎಲ್ಲಕ್ಕಿಂತ ಹೆಚ್ಚಾಗಿ ‘ಒಬ್ಬ ಮುಸ್ಲಿಮನಾಗಿಯೂ’ ಕೆಲವು ವೈದಿಕ ಅರ್ಹತೆಗಳು ಅವರಲ್ಲಿದ್ದವು. ತ್ಯಾಗರಾಜರ ಸಂಗೀತ ನುಡಿಸುವ ಶಕ್ತಿ ಅವರಿಗಿತ್ತು, ಸಸ್ಯಾಹಾರಿಯಾಗಿದ್ದರು ಎಂಬಿತ್ಯಾದಿಗಳು. ಅಟಲ್ ಬಿಹಾರಿ ವಾಜಪೇಯಿ ವ್ಯಕ್ತಿತ್ವಕ್ಕೆ ಸರಿಸಾಟಿಯಾಗುವ ಇನ್ನೊಂದು ವ್ಯಕ್ತಿತ್ವವಾಗಿತ್ತು ಕಲಾಂ ಅವರದು. ಅಣು ಪರೀಕ್ಷೆಯಿಂದಾಗಿ ಕಲಾಂ ಪಡೆದಿರುವ ಜನಪ್ರಿಯತೆಯ ಕಾರಣದಿಂದಾಗಿ ದೇಶ ಅವರನ್ನು ತುಂಬು ಮನಸ್ಸಿನಿಂದ ಒಪ್ಪಿಕೊಂಡಿತ್ತು ಕೂಡ.

ಆದರೆ ಇಂದಿನ ಸನ್ನಿವೇಶ ಹಾಗಿಲ್ಲ. ಮೋದಿ ಕಾರ್ಪೊರೇಟ್ ಶಕ್ತಿಗಳ ಕೈಗೊಂಬೆಯಾಗಿ ಕುಣಿಯುತ್ತಿರುವ ಸಂದರ್ಭ ಇದು. ಕಾರ್ಪೊರೇಟ್ ಶಕ್ತಿಗಳು ಮತ್ತು ಕೋಮು ಶಕ್ತಿಗಳು ದೇಶವನ್ನು ಅರಾಜಕತೆಗೆ ನೂಕುತ್ತಿರುವ ದಿನಗಳಲ್ಲಿ, ಸಂವಿಧಾನದ ಕಣ್ಗಾವಲಾಗಿ ಒಬ್ಬ ಸಮರ್ಥ ರಾಷ್ಟ್ರಪತಿಯ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಈ ಸಂದರ್ಭದಲ್ಲಿ ಎನ್‌ಡಿಎ ಸರಕಾರದ ವಿರುದ್ಧ ವಿರೋಧ ಪಕ್ಷದಂತೆ ಕೆಲಸ ಮಾಡಿದ ದಲಿತ ಹಿನ್ನೆಲೆಯಿಂದ ಬಂದಿರುವ ಕೆ.ಆರ್.ನಾರಾಯಣನ್‌ರನ್ನು ನಾವು ಸ್ಮರಿಸಿಕೊಳ್ಳಬೇಕಾಗಿದೆ. ವಿರೋಧ ಪಕ್ಷಗಳ ಧ್ವನಿ ಬತ್ತಿ ಹೋದ ದಿನಗಳಲ್ಲಿ, ಎನ್‌ಡಿಎ ಸರಕಾರದ ವಿರುದ್ಧ ತನ್ನ ಮಿತಿಯೊಳಗೆ ಗುದ್ದಾಡಿದವರು ನಾರಾಯಣನ್. ಆ ಮೂಲಕ ರಾಷ್ಟಪತಿಯ ಘನತೆಯನ್ನು ಎತ್ತಿ ಹಿಡಿದರು. ಕೋವಿಂದ್ ಅವರು ದಲಿತ ಸಮುದಾಯದಿಂದ ಬಂದಿರುವ ನಾಯಕ ಎನ್ನುವುದು ದೇಶಕ್ಕೆ ಬಿಡಿ, ಕನಿಷ್ಠ ದಲಿತ ಸಮುದಾಯಕ್ಕೂ ಒಳಿತನ್ನು ಮಾಡಲಾರದು. ಇದೊಂದು ರೀತಿ, ಈ ದೇಶದ ಬಡ, ಶೋಷಿತ ಸಮುದಾಯದ ವಿರುದ್ಧ ಶೋಷಿತನ ಹೆಸರನ್ನೇ ಗುರಾಣಿಯಾಗಿಟ್ಟುಕೊಂಡು ತಮ್ಮ ಉದ್ದೇಶವನ್ನು ಸಾಧಿಸಿಕೊಳ್ಳುವ ಬ್ರಾಹ್ಮಣ್ಯದ ಸಂಚಿನ ಇನ್ನೊಂದು ಭಾಗವಾಗಿದೆ.

ಇತ್ತೀಚೆಗೆ ರಾಜ್ಯದಲ್ಲಿ ಬಿಜೆಪಿ ಸಂಸದನೋರ್ವ ದೇವಸ್ಥಾನ ಪ್ರವೇಶಿಸದೆ ಹೊರಗಡೆಯಿಂದಲೇ ಅರ್ಚಕರ ಪ್ರಸಾದ ಸ್ವೀಕರಿಸಿದ ಉದಾಹರಣೆಯಂತಿದೆ ಇದು. ಆತ್ಮಾಭಿಮಾನ, ಸ್ವಾಭಿಮಾನವನ್ನು ಅಧಿಕಾರಕ್ಕಾಗಿ ಮೇಲ್ವರ್ಗಕ್ಕೆ ಮಾರಿಕೊಂಡ ದಲಿತ, ಮುಸ್ಲಿಮರು ಅದೆಷ್ಟೇ ಎತ್ತರದ ಸ್ಥಾನ ಏರಿದರೂ ಅವರನ್ನು ಬಳಸಿಕೊಂಡು ಮೇಲ್ವರ್ಗ ತನ್ನ ಉದ್ದೇಶ ಸಾಧಿಸಿಕೊಳ್ಳಬಹುದೇ ಹೊರತು, ತಳಸ್ತರದ ಜನರಿಗೆ ಅವರಿಂದ ಯಾವ ಪ್ರಯೋಜನವೂ ಇಲ್ಲ. ಯಾವ ಸಂದರ್ಭದಲ್ಲೂ ತಮ್ಮ ನಾಯಕರ ಮುಂದೆ ಧ್ವನಿ ಎತ್ತಿ ಮಾತನಾಡಿದ ಉದಾಹರಣೆ ಇಲ್ಲದ ಕೋವಿಂದ್, ಮೋದಿಯ ಪಾಲಿಗೆ ಒಬ್ಬ ಯಶಸ್ವೀ ‘ರಬ್ಬರ್ ಸ್ಟಾಂಪ್’ ಅಷ್ಟೇ ಆಗಬಲ್ಲರು. ಇದು ಕಾರ್ಪೊರೇಟ್ ಬೆಂಬಲಿತ ಸರ್ವಾಧಿಕಾರಿ ನಿಲುವಿನ ನಾಯಕರು ಮತ್ತು ದೇಶದ ಸಂವಿಧಾನವನ್ನು ತಿರುಚಲು ಸಂಚು ಹೂಡಿರುವ ಆರೆಸ್ಸೆಸ್‌ನಂತಹ ಸಂಘಟನೆಗಳಿಗೆ ಮುಂದಿನ ದಾರಿಯನ್ನು ಇನ್ನಷ್ಟು ಸುಗಮ ಮಾಡಿಕೊಡಬಹುದಾಗಿದೆ.

ಈ ಕಾರಣದಿಂದಲೇ ಬಿಜೆಪಿಯ ಅಭ್ಯರ್ಥಿಯನ್ನು ವಿರೋಧ ಪಕ್ಷಗಳು ಒಂದಾಗಿ ಎದುರಿಸುವ ಕಾರ್ಯಯೋಜನೆಯನ್ನು ರೂಪಿಸಬೇಕಾಗಿದೆ. ಈಗಾಗಲೇ ಯುಪಿಎ ದಿ. ಜಗಜೀವನ್ ರಾಮ್ ಅವರ ಪುತ್ರಿ ಮೀರಾಕುಮಾರ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮುಂದಿಡುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಕೋವಿಂದ್‌ಗೆ ಹೋಲಿಸಿದರೆ ಮೀರಾಕುಮಾರ್, ರಾಷ್ಟ್ರಪತಿ ಸ್ಥಾನಕ್ಕೆ ಹೆಚ್ಚು ಅರ್ಹರೂ ಆಗಿದ್ದಾರೆ. ಅವರು ಗೆಲ್ಲುವುದು ಕಷ್ಟ ಸಾಧ್ಯವೇ ಆಗಿದ್ದರೂ, ಕೋವಿಂದ್ ಅವರನ್ನು ಸುಲಭ ದಾರಿಯಲ್ಲಿ ರಾಷ್ಟ್ರಪತಿ ಹುದ್ದೆ ಏರದಂತೆ ನೋಡಿಕೊಳ್ಳುವುದು ವಿರೋಧ ಪಕ್ಷಗಳ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News