ಅಕ್ರಮ ಮರಳು ಸಾಗಾಣೆಯಡಿ ಕೇಸ್ ದಾಖಲಾದ ವಾಹನಗಳ ಪರ್ಮಿಟ್ ರದ್ದು
ಶಿವಮೊಗ್ಗ, ಜೂ. 20: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣೆ ದಂಧೆ ದೊಡ್ಡ ಮಾಫಿಯಾವಾಗಿ ಬೆಳೆದು ನಿಂತಿದ್ದು, ಈ ದಂಧೆಗೆ ಕಡಿವಾಣ ಹಾಕಲು ಆಡಳಿತ ವ್ಯವಸ್ಥೆ ಏನೆಲ್ಲ ಕ್ರಮಕೈಗೊಂಡರೂ ಮರಳು ದಂಧೆಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇಂದಿಗೂ ಕೂಡ ಅಕ್ರಮ ಮರಳು ಸಾಗಾಣೆ ಎಗ್ಗಿಲ್ಲದೆ ನಡೆಯುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಈ ನಡುವೆ ಜಿಲ್ಲಾಡಳಿತ ಕಾನೂನುಬಾಹಿರ ಮರಳು ಸಾಗಾಣೆಗೆ ಕಡಿವಾಣ ಹಾಕಲು ಹೊಸ ನಿರ್ಧಾರವೊಂದು ಕೈಗೊಂಡಿದ್ದು, ಅಕ್ರಮವಾಗಿ ಮರಳು ಸಾಗಾಣೆಯಡಿ ಕೇಸ್ ದಾಖಲಾಗುವ ಲಾರಿ ಸೇರಿದಂತೆ ಇತರೆ ವಾಹನಗಳ ರಹದಾರಿ ಪತ್ರ (ಆರ್.ಸಿ. ಪರ್ಮಿಟ್) ರದ್ದುಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ.
ಇತ್ತೀಚೆಗೆ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಅಕ್ರಮ ಮರಳು ಸಾಗಾಣೆ ದಂಧೆಗೆ ವಾಹನ ಬಳಕೆ ಮಾಡುವವರ ನಿದ್ದೆಗೆಡುವಂತೆ ಮಾಡಿದೆ. ಈ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತಿಳಿಸಿದ್ದಾರೆ. ಕಾನೂನುಬಾಹಿರ ಮರಳು ಸಾಗಾಣೆ ಆರೋಪದ ಮೇರೆಗೆ ಸೀಜ್ ಮಾಡಲಾಗುವ ವಾಹನಗಳ ಆರ್.ಸಿ. ರದ್ದುಪಡಿಸುವ ನಿರ್ಧಾರವನ್ನು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.ಆರು ತಿಂಗಳವರೆಗೆ ಇಂತಹ ವಾಹನಗಳ ಆರ್.ಸಿ. ರದ್ದುಗೊಳಿಸಲಾಗುವುದು. ಅಕ್ರಮ ಮರಳು ಸಾಗಾಣೆಯಡಿ ಕೇಸ್ ದಾಖಲಿಸಿದ ವಾಹನಗಳ ಸಮಗ್ರ ವಿವರಗಳನ್ನು ಆರ್‌ಟಿಓಗೆ ಕಳುಹಿಸಿ ಕೊಡಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸ್ವಾಗತಾರ್ಹ ಕ್ರಮ: ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಕಾನೂನು ಬಾಹಿರ ಮರಳು ಸಾಗಾಣೆ ದೊಡ್ಡ ದಂಧೆಯಾಗಿ ಪರಿವರ್ತಿತವಾಗಿದ್ದು, ದಂಧೆಕೋರರು ಕೋಟ್ಯಾಂತರ ರೂ. ವಹಿವಾಟು ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನಿರಂತರ ದಾಳಿ ನಡೆಸಿದರೂ ಈ ದಂಧೆಗೆ ಬ್ರೇಕ್ ಬಿದ್ದಿಲ್ಲವಾಗಿದೆ. ಮರಳು ತೆಗೆಯುವ ಸ್ಥಳಗಳ ಮೇಲೆ ವಿವಿಧ ಇಲಾಖೆಗಳು ದಾಳಿ ನಡೆಸಿದ ವೇಳೆ ದಂಧೆಕೋರರು ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗುತ್ತಾರೆ. ಈ ವೇಳೆ ನಿಯಾಮಾನುಸಾರ ವಾಹನಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ಕೇಸ್ ದಾಖಲಿಸಲಿಸುತ್ತಾರೆ. ಇಂತಿಷ್ಟು ದಂಡ ಹಾಕಿ ಅವುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅಧಿಕಾರಿಗಳು ಸೂಚಿಸಿದಷ್ಟು ದಂಡ ಪಾವತಿಸುತ್ತಿದ್ದ ದಂಧೆಕೋರರು, ಮತ್ತೆ ಈ ವಾಹನಗಳನ್ನು ಅಕ್ರಮ ಮರಳು ಸಾಗಾಣೆ ದಂಧೆಗೆ ಬಳಕೆ ಮಾಡುತ್ತಿದ್ದರು.
ಈ ವಿಷಯ ಅರಿತ ಜಿಲ್ಲಾ ರಕ್ಷಣಾಧಿಕಾರಿಯು ಇದೀಗ ದಂಧೆಕೋರರಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದ್ದು, ಕೇಸ್ ದಾಖಲಾಗುವ ವಾಹನಗಳ ಆರ್.ಸಿ.ಯನ್ನು ಆರು ತಿಂಗಳವರೆಗೆ ರದ್ದುಪಡಿಸುವ ನಿರ್ಧಾರ ಮಾಡಿದ್ದು, ಸಾರಿಗೆ ಪ್ರಾಧಿಕಾರದ ಸಭೆಯಲ್ಲಿಯೂ ಇದಕ್ಕೆ ಅನುಮತಿ ಕೊಡಿಸಿದ್ದಾರೆ.