×
Ad

ಕಾಂಗ್ರೆಸ್ ಜೊತೆ ಕೈಜೋಡಿಸಿದ ಚೆಲುವರಾಯಸ್ವಾಮಿ

Update: 2017-06-20 20:41 IST

ಮದ್ದೂರು, ಜೂ.20: ತಾಲೂಕಿನ ಕೊಪ್ಪ ಜಿಪಂ ಕ್ಷೇತ್ರಕ್ಕೆ ಜುಲೈ 2 ರಂದು ನಡೆಯಲಿರುವ ಉಪಚುನಾವಣೆಗೆ ಕೊನೆಯ ದಿನವಾದ ಮಂಗಳವಾರ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದಿಂದ ಕಲಾವತಿ ಪ್ರಕಾಶ್, ಜೆಡಿಎಸ್‌ನಿಂದ ರೇಣುಕಾ ರಾಮಕೃಷ್ಣ ಹಾಗೂ ಬಿಜೆಪಿಯಿಂದ ಪುಟ್ಟಮ್ಮ ನಾಮಪತ್ರ ಸಲ್ಲಿಸಿದ ಪ್ರಮುಖರು.

ಜೆಡಿಎಸ್ ವರಿಷ್ಠರೊಂದಿಗಿನ ವೈಮನಸ್ಯದಿಂದ ಕಾಂಗ್ರೆಸ್ ಪಕ್ಷದತ್ತ ಸರಿಯಲು ಪ್ರಯತ್ನಿಸುತ್ತಿರುವ ಶಾಸಕ ಎನ್.ಚೆಲುವರಾಯಸ್ವಾಮಿ ಅವರಿಗೆ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿರುವುದು ಈ ದಿನದ ವಿಶೇಷ ಬೆಳವಣಿಗೆಯಾಗಿದೆ.

ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಜಾನಕಮ್ಮ ಪ್ರತಿನಿಧಿಸಿದ್ದರು. ಅನಾರೋಗ್ಯದಿಂದ ನಿಧನರಾಗಿದ್ದರಿಂದ ಚುನಾವಣೆ ಎದುರಾಗಿದೆ.

ನಾಗಮಂಗಲ ಕ್ಷೇತ್ರದ ವ್ಯಾಪ್ತಿಗೆ ಈ ಜಿಪಂ ಕ್ಷೇತ್ರವು ಸೇರಿದ್ದು, ದಳದ ವರಿಷ್ಠರೊಂದಿಗಿನ ವೈಮನಸ್ಯದಿಂದ ಸಿಡಿದೆದ್ದಿರುವ ಚೆಲುವರಾಯಸ್ವಾಮಿ ಅವರಿಗೆ ಕ್ಷೇತ್ರ ಉಳಿಸಿಕೊಳ್ಳುವುದು ಮುಂದಿನ ವಿಧಾನಸಭೆ ಚುನಾವಣೆ ಕಾರಣಕ್ಕೆ ಪ್ರತಿಷ್ಠೆಯ ವಿಷಯವಾಗಿದೆ.

ಈ ಹಿನ್ನಲೆಯಲ್ಲಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಸ್.ಆತ್ಮಾನಂದ, ಜಿಪಂ ಮಾಜಿ ಅಧ್ಯಕ್ಷ ಬಿ.ವಿವೇಕಾನಂದ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರೊಂದಿಗೆ ಚಲುವರಾಯಸ್ವಾಮಿ ಅವರು ಚರ್ಚೆ ನಡೆಸಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೊದಲು ಗೀತಾ ಶಿವರಾಮ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದರು. ಶಾಸಕ ಚಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರ ನಡುವಿನ ಮಾತುಕತೆಯ ನಂತರ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜಾನಕಮ್ಮನವರ ಸಂಬಂಧಿ ಕಲಾವತಿ ಪ್ರಕಾಶ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಯಿತು.

 ಕಾಂಗ್ರೆಸ್ ಪಕ್ಷದಿಂದ ಕಲಾವತಿ ಪ್ರಕಾಶ್ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಚಲುವರಾಯಸ್ವಾಮಿ ಪ್ರತ್ಯಕ್ಷವಾಗಿ ಆಗಮಿಸದೆ ಅಣ್ಣನ ಮಗ ರವಿ ಹಾಗೂ ಬೆಂಬಲಿಗ ದಿವಾಕರ್ ಕಳುಹಿಸಿದ್ದರು, ಜತೆಗೆ ಜಿಪಂ ಮಾಜಿ ಅಧ್ಯಕ್ಷ ವಿವೇಕಾನಂದ, ತಾಪಂ ಮಾಜಿ ಸದಸ್ಯ ಶಿವರಾಂ, ಮುಖಂಡರಾದ ಗೀತಾಶಿವರಾಮು, ದೇವರಾಜು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಗೌಡ ಇದ್ದರು.

ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣ ಬೆಂಬಲಿಗರು ಸಹ ಕಾಂಗ್ರೆಸ್ ಅಭ್ಯರ್ಥಿಯ ಜತೆಗೆ ಕಾಣಿಸಿ ಕೊಂಡಿರುವುದು ಬಿಜೆಪಿೆ ಇರುಸು ಮುರುಸು ತಂದಿತು.

ಬಿ.ಜೆ.ಪಿ. ಅಭ್ಯರ್ಥಿಯಾಗಿ ಪುಟ್ಟಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಲಕ್ಷ್ಮಣ್‌ಕುಮಾರ್, ಮುಖಂಡರಾದ ಎಚ್.ಜಿ. ನರಸಿಂಹಮೂರ್ತಿಗೌಡ, ವನಜಾಕ್ಷಿ ರಾಮರಾಜು, ಶಿವಣ್ಣ, ವೀರಭದ್ರ, ಜಗನ್ನಾಥ, ಕೆ.ಎಂ. ರಮೇಶ್ ಹಾಜರಿದ್ದರು.

ಜೆ.ಡಿ.ಎಸ್. ಅಭ್ಯರ್ಥಿ ರೇಣುಕಾರಾಮಕೃಷ್ಣ ಶಾಸಕರಾದ ಕೆ.ಟಿ. ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮಾಜಿ ಶಾಸಕರಾದ ಸುರೇಶ್‌ಗೌಡ, ಶಿವರಾಮೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ರಮೇಶ್, ಬಸರಾಳು ಜಿಪಂ ಸದಸ್ಯ ಶಿವಣ್ಣ ಹಾಗೂ ಇತರರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಒಟ್ಟು 6 ನಾಮಪತ್ರ ಸಲ್ಲಿಕೆಯಾಗಿದ್ದು, ನಾಮಪತ್ರಗಳ ಪರಿಶೀಲನೆ ಬುಧವಾರ ನಡೆಯಲಿದೆ ಎಂದು ಚುನಾವಣಾಧಿಕಾರಿ ಕೃಷಿ ಇಲಾಖೆ ಉಪ ನಿದೇರ್ಶಕ ಕೆ.ಎಚ್.ರವಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News