ರೈತರ ಸಾಲದ ವಿಚಾರದಲ್ಲಿ ಕೇಂದ್ರದ ಕುಂಟು ನೆಪ : ಕುಮಾರಸ್ವಾಮಿ ಆಕ್ರೋಶ

Update: 2017-06-20 16:34 GMT

ಮಂಡ್ಯ, ಜೂ.20: ಕೈಗಾರಿಕೋದ್ಯಮಿಗಳ ಲಕ್ಷ ಕೋಟಿ ಸಾಲಮನ್ನಾ ಮಾಡಿದ ಕೇಂದ್ರ ಸರಕಾರ ರೈತರ ಸಾಲಮನ್ನಾದಿಂದ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗುತ್ತದೆಂದು ಕುಂಟುನೆಪ ಹೇಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಹಾಲಹಳ್ಳಿ ಬಡಾವಣೆಯಲ್ಲಿ ಮಂಗಳವಾರ ನಡೆದ ಇಡಗುಂಜಿ ಸಂಕಷ್ಟಹರ ಮಹಾಗಣಪತಿ ದೇವರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಕಿಡಿಕಾರಿದರು.

ರೈತರ ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ಕಾಲ ಕಳೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಕಾಳಜಿಯಿದ್ದರೆ ಕೂಡಲೇ ರೈತರ ಎಲ್ಲಾ ಸಾಲಮನ್ನಾ ಮಾಡಲಿ ಎಂದು ಒತ್ತಾಯಿಸಿದರು.

ಕನಿಷ್ಠ 50 ಸಾವಿರ ರೂ.ವರೆಗಿನ ಸಾಲವನ್ನಾದರೂ ರಾಜ್ಯ ಸರಕಾರ ಮನ್ನಾಮಾಡುವ ನಿರೀಕ್ಷೆಯಿದೆ. ಇಲ್ಲದಿದ್ದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕಷ್ಟ ಎದುರಿಸಬೇಕಾಗುತ್ತದೆ. ರೈತರು ಆತ್ಮಹತ್ಯೆ ಹಾದಿಹಿಡಿಯದೆ ಧೈರ್ಯದಿಂದ ಸಮಸ್ಯೆ ಎದುರಿಸಬೇಕು ಎಂದು ಅವರು ಸಲಹೆ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸರಕಾರವನ್ನು ಅಧಿಕಾರಕ್ಕೆ ತಂದಲ್ಲಿ ರೈತರ ಎಲ್ಲಾ ಸಾಲಮನ್ನಾ ಮಾಡುವುದರ ಜತೆಗೆ, ಯುವಕರಿಗೆ ಉದ್ಯೋಗ ಸೃಷ್ಟಿ, ಕೃಷಿ ಕ್ಷೇತ್ರಕ್ಕೆ ಚೈತನ್ಯ ತುಂಬಲಾಗುವುದು ಎಂದು ಅವರು ಪುನರುಚ್ಚರಿಸಿದರು.

ಕಳೆದ ಮೂರು ವರ್ಷದಿಂದ ಮಳೆಯಿಲ್ಲದೆ ಬರದ ದವಡೆಗೆ ಸಿಲುಕಿರುವ ರೈತಾಪಿ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಕೆಆರ್‌ಎಸ್ ಜಲಾಶಯ ಕಳೆದ ವರ್ಷವೂ ತುಂಬಲಿಲ್ಲ. ಈ ವರ್ಷವೂ ತುಂಬುವ ಸೂಚನೆ ಕಾಣುತ್ತಿಲ್ಲ ಎಂದು ಅವರು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಪ್ರಭಾವತಿ ಜಯರಾಂ, ಎಂ.ಶ್ರೀನಿವಾಸ್, ನಗರಸಭೆ ಸದಸ್ಯರಾದ ನರಸಮ್ಮ, ಶಾರದಮ್ಮ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಝಫರುಲ್ಲಾ ಖಾನ್, ಗಣಿಗ ರವಿಕುಮಾರ್, ಎಚ್.ಎನ್.ಅಜಯ್‌ಕುಮಾರ್, ಎಚ್.ಕೆ.ರುದ್ರಪ್ಪ, ಎಚ್.ಎಸ್.ದೀಪಕ್, ಎಚ್.ಎನ್.ಮಹೇಶ್, ಎಚ್.ಎನ್.ಶ್ರೀನಿವಾಸ್, ಸಿ.ಮಹೇಶ್, ಅರವಿಂದ್ ಕುಮಾರ್, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News