ಜೂ. 21: ನಗರದಲ್ಲಿ 3ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

Update: 2017-06-20 16:37 GMT

ಚಾಮರಾಜನಗರ, ಜೂ. 20: ಶಾಂತಿ ಮತ್ತು ಐಕ್ಯತೆಗಾಗಿ ಯೋಗ ಎಂಬ ಶೀರ್ಷಿಕೆಯಡಿ ಜೂನ್ 21ರಂದು 3ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತಿದ್ದು, ಜಿಲ್ಲಾದ್ಯಂತ ಸುಮಾರು 50 ಸಾವಿರ ಮಂದಿ ಯೋಗ ಪ್ರದರ್ಶನ ನೀಡುವ ಮೂಲಕ ಸಾಕ್ಷೀಕರಿಸಲಿದ್ದಾರೆ.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಪತಂಜಲಿ ಯೋಗ ಫೌಂಡೇಶನ್ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಈ ಬಾರಿ ಈ ಹಿಂದಿನ ವರ್ಷಗಳಿಗಿಂತ ವಿಭಿನ್ನವಾಗಿ ಯೋಗ ದಿನ ಆಚರಣೆಗೆ ಸಜ್ಜುಗೊಳ್ಳಲಾಗಿದೆ. ಈ ಬಾರಿ ಜಿಲ್ಲೆಯ ಎಲ್ಲಾ 16 ಹೋಬಳಿ ಕೇಂದ್ರಗಳಲ್ಲಿಯೂ ಸಾಮೂಹಿಕ ಯೋಗ ಪ್ರದರ್ಶನ ನೀಡಲಾಗುತ್ತಿದೆ. ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಶಿಕ್ಷಕರು, ಸರ್ಕಾರಿ ಇಲಾಖೆಯ ಅಧಿಕಾರಿ, ಸಿಬ್ಬಂದಿ, ನಾಗರಿಕರು, ಯೋಗ ಆಸಕ್ತರು ಭಾಗವಹಿಸಲಿದ್ದಾರೆ.

ಸಾಮೂಹಿಕ ಯೋಗ ಆಚರಣೆಗೆ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯೋಗ ತಾಲೀಮು ನಡೆಸಿದ್ದು, ಜೂನ್ 21ರ ಯೋಗ ದಿನದಂದು ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈಗಾಗಲೇ ಸಾಕಷ್ಟು ಪೂರ್ವಭಾವಿ ಸಭೆ ನಡೆಸುವ ಮೂಲಕ ಅಗತ್ಯ ಮಾರ್ಗದರ್ಶನ ಮಾಡಿದ್ದಾರೆ. ಅಧಿಕಾರಿ, ಶಿಕ್ಷಕರು, ಸಿಬ್ಬಂದಿ ಸಹ ನಿಗದಿಯಾದ 45 ನಿಮಿಷಗಳ ಯೋಗ ಆಸನಗಳನ್ನು ಅಭ್ಯಾಸ ಮಾಡಿದ್ದಾರೆ.

ಚಾಮರಾಜನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜೂನ್ 21ರಂದು ಬೆಳಿಗ್ಗೆ 6.30 ಗಂಟೆಗೆ ಯೋಗ ಪ್ರದರ್ಶನ ಆರಂಭವಾಗಲಿದೆ. ನಗರದಲ್ಲಿ ನಡೆಯುವ ಯೋಗ ಪ್ರದರ್ಶನದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳು ಯೋಗ ಆಸಕ್ತರು, ಜನಪ್ರತಿನಿಧಿಗಳು, ನಾಗರಿಕರು, ಅಧಿಕಾರಿ ಸಿಬ್ಬಂದಿ ವರ್ಗದವರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಹೋಬಳಿಗೆ ಸಂಬಂಧಿಸಿದಂತೆ ವೆಂಕಟಯ್ಯನ ಛತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಹರವೆ ಹೋಬಳಿಗೆ ಸಂಬಂಧಿಸಿದಂತೆ ಹರವೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತೇಮರಳ್ಳಿ ಹೋಬಳಿಗೆ ಸಂಬಂಧಿಸಿದಂತೆ ಸಂತೇಮರಳ್ಳಿಯ ಜೆ.ಎಸ್.ಎಸ್. ಪದವಿ ಪೂರ್ವ ಕಾಲೇಜು, ಚಂದಕವಾಡಿ ಹೋಬಳಿಗೆ ಸಂಬಂಧಿಸಿದಂತೆ ಚಂದಕವಾಡಿಯ ಸರ್ಕಾರಿ ಪದವಿಪೂರ್ವ ಕಾಲೇಜು, ಕೊಳ್ಳೇಗಾಲ ಪಟ್ಟಣದ ಎಂ.ಜಿ.ಎಸ್.ವಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಾಳ್ಯ ಹೋಬಳಿಗೆ ಸಂಬಂಧಿಸಿದಂತೆ ಪಾಳ್ಯ ಗ್ರಾಮಾಂತರ ಪೌಢಶಾಲೆ, ಹನೂರು ಹೋಬಳಿಗೆ ಸಂಬಂಧಿಸಿದಂತೆ ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣ, ರಾಮಾಪುರ ಹೋಬಳಿಗೆ ಸಂಬಂಧಿಸಿದಂತೆ ರಾಮಾಪುರದ ಸರ್ಕಾರಿ ಪ್ರೌಢಶಾಲೆ, ಲೊಕ್ಕನಹಳ್ಳಿಗೆ ಸಂಬಂಧಿಸಿದಂತೆ ಲೊಕ್ಕನಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಗುಂಡ್ಲುಪೇಟೆ ಕಸಬಾ ಹೋಬಳಿಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪಟ್ಟಣದ ಡಿ.ದೇವಅರಸು ಕ್ರೀಡಾಂಗಣ, ಬೇಗೂರು ಹೋಬಳಿಗೆ ಸಂಬಂಧಿಸಿದಂತೆ ಬೇಗೂರಿನ ಸರ್ಕಾರಿ ಪದವಿಪೂರ್ವ ಕಾಲೇಜು, ಹಂಗಳ ಸರ್ಕಾರಿ ಪದವಿಪೂರ್ವ ಕಾಲೇಜು, ತೆರಕಣಾಂಬಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಯಳಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಅಗರದ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆ, ಬಿಳಿಗಿರಿರಂಗನಬೆಟ್ಟದ ವಿ.ಜಿ.ಕೆ.ಕೆ ಕೇಂದ್ರದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನೀಡಲಾಗುತ್ತಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News