ರಾಜ್ಯಮಟ್ಟದ ಬುಡಕಟ್ಟು ಉತ್ಸವಕ್ಕೆ ವರ್ಣರಂಜಿತ ಚಾಲನೆ

Update: 2017-06-20 16:41 GMT

ಚಾಮರಾಜನಗರ, ಜೂ. 20 : ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಜಿಲ್ಲಾಡಳಿತ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಎರಡು ದಿನಗಳ ಬುಡಕಟ್ಟು ಉತ್ಸವಕ್ಕೆ ಇಂದು ವರ್ಣರಂಜಿತ ಚಾಲನೆ ದೊರೆಯಿತು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಉತ್ಸವಕ್ಕೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ಚಾಲನೆ ನೀಡಿದರು. ಇದೇವೇಳೆ ಮಾತನಾಡಿದ ಧ್ರುವನಾರಾಯಣ ಅವರು ಬುಡಕಟ್ಟು ಜನರಲ್ಲಿ ವೈವಿಧ್ಯಮಯ ಸಂಸ್ಕೃತಿ ಕಲಾಪ್ರಕಾರಗಳು ಇವೆ. ಇಂತಹ ವಿಭಿನ್ನ ಪರಂಪರೆ ಅನಾವರಣಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಬುಡಕಟ್ಟು ಉತ್ಸವವನ್ನು ಆಯೋಜಿಸಲಾಗುತ್ತಿದೆ. ಇದರಿಂದ ಬೇರೆಬೇರೆ ಪ್ರದೇಶಗಳ ಬುಡಕಟ್ಟು ಜನರು ಒಂದೆಡೆ ಸೇರಿ ಕಲೆ ಸಂಸ್ಕೃತಿಯನ್ನು ಪ್ರದರ್ಶಿಸಲು ಅನುಕೂಲವಾಗುತ್ತಿದೆ ಎಂದರು.

ರಾಜ್ಯದಲ್ಲಿ 42 ಲಕ್ಷ ಬುಡಕಟ್ಟು ಜನರು ಇದ್ದಾರೆ. ಹಲವಾರು ಸಮುದಾಯಗಳಿವೆ. ಆದರೆ ಮೂಲ ನಿವಾಸಿಗಳ ಪಟ್ಟಿಯಲ್ಲಿ ಜೇನುಕುರುಬ, ಕೊರವರು ಮಾತ್ರ ಸೇರ್ಪಡೆಯಾಗಿದೆ. ಸೋಲಿಗರ ಸಂಖ್ಯೆಯೂ ಸಾಕಷ್ಟಿದ್ದು ಇವರನ್ನೂ ಸಹ ಮೂಲನಿವಾಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ರಾಜ್ಯವು ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಧ್ರುವನಾರಾಯಣ ತಿಳಿಸಿದರು.

ಬುಡಕಟ್ಟು, ಅರಣ್ಯವಾಸಿಗಳು ಹಾಗೂ ಕಾಡಂಚಿನ ಪ್ರದೇಶದ ಜನರು ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಶಿಕ್ಷಣ ಪಡೆಯಲು ಅನುವಾಗುವಂತೆ ಸರ್ಕಾರ ಮೊರಾರ್ಜಿ, ಏಕಲವ್ಯ ಹಾಗೂ ಆಶ್ರಮಶಾಲೆಗಳನ್ನು ಹೆಚ್ಚು ಸಂಖ್ಯೆಯಲ್ಲಿ ತೆರೆದಿದೆ. ಈ ಪ್ರಯೋಜನ ಪಡೆಯಬೇಕು. ಶಿಕ್ಷಣದಿಂದಲೇ ಸರ್ವಪ್ರಗತಿಯೂ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ಹೆಚ್ಚು ಆಸಕ್ತಿವಹಿಸಿ ಶಿಕ್ಷಣ ಪಡೆಯಲು ಉತ್ತೇಜಿಸಬೇಕಾದ ಅಗತ್ಯವಿದೆ ಎಂದು ಧ್ರುವನಾರಾಯಣ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಬುಡಕಟ್ಟು ಜನರ ಕಲೆ, ಸಂಸ್ಕೃತಿ ಪರಂಪರೆಯನ್ನು ಪೋಷಿಸಲು ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತದೆ. ಅತ್ಯಂತ ವೈಶಿಷ್ಟ್ಯಪೂರ್ಣವಾದ ಬುಡಕಟ್ಟು ಜನರು ಆಚರಿಸಿಕೊಂಡು ಬರುತ್ತಿರುವ ಎಲ್ಲ ಪ್ರಕಾರಗಳಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.


ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಲ್ಲಿರುವ ಬುಡಕಟ್ಟು ಜನರ ಆರೋಗ್ಯ ರಕ್ಷಣೆಗಾಗಿಯೇ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತದೆ. ಶಿಕ್ಷಣ ಇನ್ನಿತರ ಪ್ರಮುಖ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುತ್ತಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜನತೆ ಮುಂದೆಬರಬೇಕೆಂದು ರಾಮಚಂದ್ರ ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಬಿ. ರಾಮು ಅವರು ಮಾತನಾಡಿ ಜಿಲ್ಲೆಯಲ್ಲಿ 146 ಹಾಡಿಗಳಿವೆ. ಈ ಜನರ ಆರೋಗ್ಯ, ಶಿಕ್ಷಣ ಕಾರ್ಯಕ್ರಮಗಳಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಅರಣ್ಯವಾಸಿಗಳಿಗೆ ಪ್ರಸ್ತುತ 6 ತಿಂಗಳ ಅವಧಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರವನ್ನು 12 ತಿಂಗಳಿಗೆ ಹೆಚ್ಚಿಸುವ ದಿಸೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಪ್ರೊ. ಟಿ.ಟಿ. ಬಸವನಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಜಿ.ಪಂ. ಸದಸ್ಯರಾದ ಶಿವಮ್ಮ, ಚನ್ನಪ್ಪ, ಉಮಾವತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಅಲಿಖಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್ ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಎ. ರಾಜೇಂದ್ರಪ್ರಸಾದ್, ಇತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News