ಗಿರಿಜನರಿಗೆ ಸಾಗುವಳಿ ಪಟ್ಟಾ ಪುಸ್ತಕ ವಿತರಣೆ

Update: 2017-06-20 16:45 GMT

ಚಾಮರಾಜಗರ, ಜೂ.20: ತಾಲೂಕಿನ ಮೂಕನಪಾಳ್ಯ ಗ್ರಾಮದಲ್ಲಿ ಗಿರಿಜನ ರೈತ ಫಲಾನುಭವಿಗಳಿಗೆ ಆರ್‌ಟಿಸಿ ಮತ್ತು ಪಟ್ಟಾ ಪುಸ್ತಕಗಳನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ವಿತರಿಸಿದರು.

ಮೂಕನಪಾಳ್ಯ ಗ್ರಾಮದ ಸಾಗುವಳಿ ಚೀಟಿ ಪಡೆದಿದ್ದ 32 ಗಿರಿಜನ ರೈತರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಆರ್‌ಟಿಸಿ ಮತ್ತು ಪಟ್ಟಾ ಪುಸ್ತಕಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮೂಕನಪಾಳ್ಯ ಕಾಡಂಚಿನ ಗ್ರಾಮವಾಗಿದ್ದು, ಈ ಭಾಗದಲ್ಲಿ ಹಲವು ರೈತರು ಹಲವು ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಬರುತ್ತಿದ್ದರೂ ಅವರಿಗೆ ಅಧಿಕೃತವಾಗಿ ಭೂಮಿಯ ಮೇಲೆ ಯಾವುದೇ ಹಕ್ಕು ಇರಲಿಲ್ಲ. ಆದರೆ ನಾನು ಮೊದಲ ಬಾರಿ ಶಾಸಕನಾದಾಗ 9 ವರ್ಷಗಳ ಹಿಂದೆ ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಗುವಳಿ ಚೀಟಿ ವಿತರಿಸಿದ್ದು, ಈ ಗ್ರಾಮಕ್ಕೆ ಮೊದಲು. ಹೀಗಾಗಿ ಇಲ್ಲಿನ 32 ರೈತರಿಗೆ ನಾನೇ ಖುದ್ದು ಆರ್‌ಟಿಸಿ, ಪಟ್ಟಾ ಪುಸ್ತಕಗಳನ್ನು ನೀಡುವ ಮೂಲಕ, ಕಾಡಿನ ರಕ್ಷಣೆ ಮಾಡುವ ಗಿರಿಜನರು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿ, ಆರ್ಥಿಕ ಪ್ರಗತಿ ಹೊಂದಬೇಕು ಎಂಬ ಆಶಯ ಹೊಂದಿರುವುದಾಗಿ ಹೇಳಿದರು.


ಗಿರಿಜನ ರೈತರು ಸಹ ಕೃಷಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹಲವು ಯೋಜನೆಗಳು ಜಾರಿಯಾಗುತ್ತಿವೆ. ಅವುಗಳನ್ನು ಬಳಸಿಕೊಂಡು ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು. ಕೃಷಿ ಭಾಗ್ಯದಂತಹ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡರೆ, ಆರ್ಥಿಕವಾಗಿ ಉತ್ತಮ ಸ್ಥಿತಿಗೆ ತಲುಪಬಹುದು. ಇದರಿಂದ ಜೀವನ ಮಟ್ಟವೂ ಸುಧಾರಣೆಯಾಗುತ್ತೆ ಎಂದರು.


ಗಿರಿಜನರಿಗಾಗಿ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ. ಗಂಗಾ ಕಲ್ಯಾಣ, ಆಶ್ರಯ ಮನೆಗಳು, ಸಮುದಾಯ ಭವನಗಳು, ರಸ್ತೆಗಳು, ಚರಂಡಿಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟಾರೆ ನಮ್ಮ ಸರ್ಕಾರವು ಗಿರಿಜನರ ಕಲ್ಯಾಣಕ್ಕಾಗಿ ಸದಾ ಬದ್ಧವಾಗಿದ್ದು, ಇನ್ನೂ ಅಗತ್ಯವಿರುವ ಕಡೆಗಳಿಗೆ ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಪಂ ಸದಸ್ಯ ಪಿ.ಕುಮಾರನಾಯಕ್, ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಸಮೀರ್ ಪಾಶಾ, ಮಾಜಿ ಉಪಾಧ್ಯಕ್ಷ ಉಲ್ಲೇಶ್ ನಾಯಕ್, ಸದಸ್ಯ ಗಣೇಶ್ ನಾಯಕ್, ತಹಸೀಲ್ದಾರ್ ಪುರಂದರ್ ಮತ್ತು ಫಲಾನುಭವಿಗಳು, ಗ್ರಾಮಸ್ಥರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News