ಬ್ರುಸ್ಸೆಲ್ಸ್ ರೈಲು ನಿಲ್ದಾಣದಲ್ಲಿ ಭೀಕರ ಸ್ಫೋಟ: ಪ್ರತಿದಾಳಿಗೆ ಶಂಕಿತ ಉಗ್ರ ಬಲಿ

Update: 2017-06-21 04:00 GMT

ಬೆಲ್ಜಿಯಂ, ಜೂ.21: ಬ್ರುಸ್ಸೆಲ್ಸ್ ಕೇಂದ್ರ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಭೀಕರ ಸ್ಫೋಟ ಸಂಭವಿಸಿದೆ. ಘಟನಾಸ್ಥಳದಲ್ಲಿ ಭದ್ರತಾ ಪಡೆ ಯೋಧರು ಶಂಕಿತ ಉಗ್ರನೊಬ್ಬನನ್ನು ಹತ್ಯೆ ಮಾಡಿದ್ದಾರೆ.

ಉಗ್ರಗಾಮಿ ರೈಲು ನಿಲ್ದಾಣ ಸ್ಫೋಟಿಸುವ ಮುನ್ನ "ಅಲ್ಲಾಹ್ ಅಕ್ಬರ್" ಎಂದು ಘೋಷಣೆ ಕೂಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಉಗ್ರನನ್ನು ತಕ್ಷಣ ಹತ್ಯೆ ಮಾಡಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬೆಲ್ಜಿಯಂನ ರಾಷ್ಟ್ರೀಯ ವಿಕೋಪ ಕೇಂದ್ರ ಪ್ರಕಟಿಸಿದೆ.

ಅಂತಾರಾಷ್ಟ್ರೀಯ ಕಾಲಮಾನ ಪ್ರಕಾರ ರಾತ್ರಿ 7ರ ವೇಳೆಗೆ ಘಟನೆ ನಡೆದಿದ್ದು, ಬ್ರುಸ್ಸೆಲ್ಸ್‌ನ ಗೇರ್ ಸೆಂಟ್ರಲ್ ಹಾಗೂ ಪ್ರಮುಖ ಪ್ರವಾಸಿ ತಾಣವಾದ ಗ್ರಾಂಡ್ ಪ್ಲೇಸ್‌ನಿಂದ ಎಲ್ಲರನ್ನೂ ಸ್ಥಳಾಂತರಿಸಲಾಗಿದೆ. "ಒಬ್ಬ ವ್ಯಕ್ತಿ ನಿಲ್ದಾಣದಲ್ಲಿ ನಿಂತಿದ್ದ. ಆತನ ಬಳಿ ಸ್ಫೋಟ ಸಂಭವಿಸಿದೆ. ತಕ್ಷಣ ಭದ್ರತಾ ಸಿಬ್ಬಂದಿ ಆತನನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ" ಎಂದು ಫೆರಡಲ್ ಪೊಲೀಸ್ ವಕ್ತಾರ ಪೀಟರ್ ಡೆ ವೀಲ್ ಹೇಳಿದ್ದಾರೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ ಭೀಕರ ಸ್ಫೋಟ ಸಂಭವಿಸಿರುವುದು ಕಾಣಿಸುತ್ತದೆ. ನಿಲ್ದಾಣದ ನೆಲಮಾಳಿಗೆಯಲ್ಲಿ ಕೂಡಾ ಬೆಂಕಿ ಚೆಂಡು ಉರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಸ್ಫೋಟ ಸಂಭವಿಸಿದ ತಕ್ಷಣ ಎಲ್ಲರನ್ನೂ ಸ್ಥಳಾಂತರಿಸುವಂತೆ ಸಹೋದ್ಯೋಗಿಗಳಿಗೆ ಸೂಚಿಸಿದೆ ಎಂದು ರೈಲ್ವೆ ಸಾರ್ಟಿಂಗ್ ಏಜೆಂಟ್ ನಿಕೋಲಸ್ ವ್ಯಾನ್ ಹೆರ್ವೇಗನ್ ವಿವರಿಸಿದ್ದಾರೆ. "ಅದು ದೊಡ್ಡ ಸ್ಫೋಟ ಅಲ್ಲದಿದ್ದರೂ, ಅದರ ಪರಿಣಾಮ ದೊಡ್ಡದು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News