ಮೆಸ್ಕಾಂ ಕಚೇರಿ ಮುಂದೆ ಗುತ್ತಿಗೆ ಕಾರ್ಮಿಕರ ಧರಣಿ

Update: 2017-06-21 12:02 GMT

ಮಂಗಳೂರು, ಜೂ.21: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಮತ್ತು ಇಂಧನ ಇಲಾಖೆಯ ಎಲ್ಲ ವಿಭಾಗಗಳ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಹಾಗೂ ಗುತ್ತಿಗೆ ಕಾರ್ಮಿಕರನ್ನು ದುಡಿಸಿ ಬಿಸಾಡುವ ನೀತಿಯನ್ನು ವಿರೋಧಿಸಿ ಮೆಸ್ಕಾಂನಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರು ನಗರದ ಬಿಜೈಯಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿಯ ಎದುರು ಬುಧವಾರ ಧರಣಿ ನಡೆಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಮಾತನಾಡಿ ಕರ್ನಾಟಕದಲ್ಲಿ ವಿದ್ಯುಚ್ಛಕ್ತಿಯು ಸಾರ್ವಜನಿಕರಿಗೆ ಮೂಲ ಸೌಕರ್ಯವಾಗಿದೆ. ವಿವಿಧ ಕೃಷಿ, ಕೈಗಾರಿಕೆ, ಸೇವೆಗಳಿಗೆ ಅಗತ್ಯವಾಗಿದೆ. ಅಲ್ಲದೆ, ರಾಜ್ಯದ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆಯನ್ನು ನೀಡಿದೆ. ಇಂತಹ ಪ್ರಮುಖ ಇಲಾಖೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರ ಪರಿಸ್ಥಿತಿ ತೀರಾ ಹೀನಾಯವಾಗಿದೆ. ಕಳೆದ 15-20 ವರ್ಷಗಳಿಂದ ದುಡಿಯುತ್ತಿರುವ ಗುತ್ತಿಗೆ ನೌಕರರಿಗೆ ಕನಿಷ್ಠ ಕೂಲಿ ನೀಡುತ್ತಿಲ್ಲ. ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇಲ್ಲ. ಅಪಘಾತಕ್ಕೀಡಾಗಿ ಮರಣ ಹೊಂದಿದರೆ ಪರಿಹಾರವನ್ನು ನೀಡದೆ ಅಮಾನವೀಯವಾಗಿ ನಡೆಸಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಇಂತಹ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಗುತ್ತಿಗೆ ಕಾರ್ಮಿಕರು ಸಂಘಟಿತರಾಗಿ ಪ್ರಬಲ ಹೋರಾಟವನ್ನು ರೂಪಿಸಬೇಕಾಗಿದೆ ಎಂದರು.
 
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ಸುಪ್ರೀಂ ಕೋರ್ಟ್ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ತೀರ್ಪು ನೀಡಿದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅದನ್ನು ಪಾಲಿಸದೆ ಉಲ್ಲಂಘಿಸುತ್ತಿರುವುದು ಖಂಡನೀಯ. ನೇರ ನೇಮಕಾತಿಯಲ್ಲಿ ಸೇವಾ ಹಿರಿತನದ ಆಧಾರದಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕಾಗಿದೆ. ಅಪಘಾತಗಳು ಸಂಭವಿಸಿದಾಗ ಕಾರ್ಮಿಕರಿಗೆ ಇಲಾಖೆಯೇ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಪರಿಹಾರವನ್ನು ನೀಡಬೇಕಾಗಿದೆ ಎಂದು ಹೇಳಿದರು.

ಧರಣಿಯಲ್ಲಿ ಮೆಸ್ಕಾಂ ಗುತ್ತಿಗೆ ಕಾರ್ಮಿಕರ ಸಂಘದ ಮುಖಂಡರಾದ ಮಹೇಶ್, ವಿನೀತ್, ಲೋಕೇಶ್, ಅನಿಲ್ ಮುಂತಾದವರು ಪಾಲ್ಗೊಂಡಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News