ದಾವಣಗೆರೆ: ಅಂತರಾಷ್ಟ್ರೀಯ ಯೋಗ ದಿನಾಚರಣೆ

Update: 2017-06-21 12:35 GMT

ದಾವಣಗೆರೆ, ಜೂ.21: ಒತ್ತಡದ ಜೀವನಕ್ಕೆ ಯೋಗ ಅವಶ್ಯಕವಿದ್ದು, ಯೋಗವನ್ನು ನಮ್ಮ ನಿತ್ಯದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಡಾ. ಸಂತೋಷ್ ಗುರೂಜಿ ತಿಳಿಸಿದರು.

ನಗರದ ನಗರದ ಮೋತಿ ವೀರಪ್ಪ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪತಂಜಲಿ ಯೋಗ ಸಮಿತಿ ಹಾಗೂ ಜಿಲ್ಲಾ ಯೋಗ ಒಕ್ಕೂಟ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಬೃಹತ್ ಯೋಗ ನಡಿಗೆ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಒತ್ತಡದ ಜೀವನದಲ್ಲಿ ಯೋಗ ಅತೀ ಮುಖ್ಯವಾಗಿದ್ದು, ದೇಹ ಮತ್ತು ಆತ್ಮ ಎರಡನ್ನೂ ಒಗ್ಗೂಡಿಸಿ, ಸಮತೋಲಿಸುತ್ತದೆ. ಬಿಪಿ, ಸಕ್ಕರೆ ಕಾಯಿಲೆ ಬಂದ ತಕ್ಷಣ ಯೋಗ ಕಲಿಯುವುದಲ್ಲ. ಬದಲಾಗಿ ಎಲ್ಲರೂ ದಿನನಿತ್ಯ ಯೋಗಾಭ್ಯಾಸ ಮಾಡಬೇಕು ಎಂದ ಅವರು, ಓಂಕಾರ ಹೇಳಬೆಕು. ಓಂಕಾರದಲ್ಲಿ ಅಗಾಧ ಶಕ್ತಿ ಇದೆ. ಓಂಕಾರ ಕೇವಲ ಭಾರತೀಯರ ಪೇಟೆಂಟ್ ಅಲ್ಲ. ಎಲ್ಲರೂ ಕಲಿಯುವಂತಹದ್ದು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಪ್ರಕೃತಿಯೊಂದಿಗಿನ ಸಹಬಾಳ್ವೆಯೇ ಯೋಗ. ಸೂರ್ಯ ಎಂದಿಗೂ ತನ್ನ ಕಾರ್ಯ ನಿಲ್ಲಿಸಿಲ್ಲ. ಅವನ ಜೊತೆ ನಾವು ಸರಿಯಾಗಿ ಕೆಲಸ ಮಾಡಲು ಸಾಧ್ಯವಾದರೆ ಅದೇ ಯೋಗ. ಪ್ರಕೃತಿಯ ಪ್ರತಿ ಕ್ರಿಯೆಯು ಸಹಜವಾಗಿ, ನಿಧಾನ ಗತಿಯಲ್ಲಿ ನಡೆಯುತ್ತಿರುತ್ತದೆ. ಇದು ಬಹಳ ಕಾಲ ನಿಲ್ಲುತ್ತದೆ. ಅದೇ ಅಸಹಜವಾಗಿ ನಡೆಯುವುದು ಬಿರುಗಾಳಿ, ಸುನಾಮಿ, ಭೂಕಂಪ ವಾಲ್ಕನೋ ಸ್ಪೋಟ ಇವೆಲ್ಲ ದಿಢೀರ್ ಆಗಿ ಸಂಭವಿಸುವ, ವಿನಾಶವನ್ನು ಉಂಟು ಮಾಡುವ ಪ್ರಕ್ರಿಯೆಗಳು. ಅದೇ ರೀತಿ ನಾವು ದಿಢೀರನೆ ಸಿಟ್ಟಿಗೆದ್ದರೆ ಅದೇ ಬಗೆಯ ವಿನಾಶ ಸಂಭವಿಸುತ್ತದೆ. ಆದ್ದರಿಂದ ಎಲ್ಲರೂ ಪ್ರಕೃತಿಯೊಂದಿಗೆ ಸಹಜವಾಗಿ ಸಹಜೀವಿಸಬೇಕು, ಯೋಗದ ಮೊರೆ ಹೋಗಬೇಕು. ಹಾಗೂ ಇತರರನ್ನೂ ಈ ಹಾದಿಯಲ್ಲಿ ಕರೆದೊಯ್ದು ಯೋಗವನ್ನು ಪಸರಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭ ಮೇಯರ್ ಅನಿತಾಬಾಯಿ ಮಾಲತೇಶ್, ಜಿ.ಪಂ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್, ಜಿಪಂ ಸದಸ್ಯರಾದ ಶೈಲಜಾ ಬಸವರಾಜ್, ಅರ್ಚನಾ ಬಸವರಾಜ್, ಜಿ.ಸಿ. ನಿಂಗಪ್ಪ, ಪಾಲಿಕೆ ಸದಸ್ಯರಾದ ಅಶ್ವಿನಿ ವೇದಮೂರ್ತಿ, ಜಿಪಂ ಸಿಇಒ ಎಸ್. ಅಶ್ವತಿ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಯು. ಸಿದ್ದೇಶಿ, ಜಿಲ್ಲಾ ಯೋಗ ಒಕ್ಕೂಟಕದ ವಾಸುದೇವ ರಾಯ್ಕರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News