ಜನರಿಕ್ ಔಷಧಿ ಜನರಿಗೆ ತಲುಪಲಿ

Update: 2017-06-21 18:48 GMT

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸರಕಾರ ಜನೌಷಧಿ ಮಳಿಗೆಗಳನ್ನು ಆರಂಭಿಸಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಭಾರತೀಯ ಜನರಿಕ್ ಕೇಂದ್ರ’ವು ಈ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ದೇಶದ ಅನೇಕ ಕಡೆ ಮಳಿಗೆಗಳನ್ನು ಆರಂಭಿಸಿದೆ. ಈಗ ಮಾರುಕಟ್ಟೆಯಲ್ಲಿ ಇರುವ ವಿವಿಧ ಔಷಧಿ ಅಂಗಡಿಗಳಿಗೆ ಹೋಲಿಸಿದರೆ ಈ ಜನೌಷಧಿ ಮಳಿಗೆಗಳಲ್ಲಿ ಸಿಗುವ ಜೀವನಾಶ್ಯಕ ಔಷಧಿಗಳು ಶೇ.90ರ ದರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ.

ನಿಧಾನವಾಗಿ ಈ ಜನೌಷಧಿ ಮಳಿಗೆಗಳು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜನಪ್ರಿಯವಾಗುತ್ತಿವೆ. ಸಣ್ಣಪುಟ್ಟ ರೋಗರುಜಿನಗಳಿಗೂ ಜನಸಾಮಾನ್ಯರು ವೈದ್ಯರ ಬಳಿಗೆ ಹೋದರೆ ದುಬಾರಿ ಬೆಲೆಯ ಬ್ರಾಂಡೆಡ್ ಔಷಧಿಯನ್ನು ಬರೆದುಕೊಡುತ್ತಾರೆ. ಇದರಲ್ಲಿ ವೈದ್ಯರು ಮತ್ತು ಔಷಧಿ ಕಂಪೆನಿಗಳ ನಂಟು ಕೂಡಾ ಪ್ರಭಾವ ಬೀರುತ್ತದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೆಲವು ದಿನಗಳ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಧಾನಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ ಆನಂತರ ಭಾರತೀಯ ವೈದ್ಯಕೀಯ ಮಂಡಳಿ ಆದೇಶವೊಂದನ್ನು ಹೊರಡಿಸಿ ಇನ್ನು ಮುಂದೆ ವೈದ್ಯರು ರೋಗಿಗಳಿಗೆ ಜನರಿಕ್ ಔಷಧಿಯನ್ನೇ ಬರೆದುಕೊಡಬೇಕೆಂದು ತಿಳಿಸಿತ್ತು.

ಈ ಭಾರತೀಯ ವೈದ್ಯಕೀಯ ಮಂಡಳಿ ಎಂಬುದು ನಮ್ಮ ದೇಶದ ವೈದ್ಯಕೀಯ ಜಗತ್ತಿಗೆ ಸಂಬಂಧಿಸಿದ ನೀತಿಗಳನ್ನು ನಿರೂಪಿಸುವ ಉನ್ನತ ಮಂಡಳಿಯಾಗಿದೆ. ಕಳೆದವರ್ಷ ಕೂಡಾ ಅದು ಕಡಿಮೆ ಬೆಲೆಯ ಜನರಿಕ್ ಔಷಧಿಯನ್ನು ವೈದ್ಯರು ಬರೆದುಕೊಡಬೇಕೆಂದು ಹಾಗೂ ಔಷಧಿ ಚೀಟಿಗಳನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆದುಕೊಡಬೇಕೆಂದು ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯ ಬಗ್ಗೆ ವೈದ್ಯರು ನಿರ್ಲಕ್ಷ ಧೋರಣೆ ತಾಳಿದರು. ಇದೀಗ ಸ್ವತಃ ಪ್ರಧಾನಿ ಮತ್ತೊಮ್ಮೆ ಬಹಿರಂಗ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಆನಂತರ ಮತ್ತೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಈ ಬಾರಿಯೂ ಹಿಂದಿನಂತೆ ವೈದ್ಯರು ಈ ಸುತ್ತೋಲೆಯ ಬಗ್ಗೆ ನಿರ್ಲಕ್ಷ ಧೋರಣೆ ತಾಳಿದರೆ ಜನಸಾಮಾನ್ಯರು ಬವಣೆ ಪಡುವುದು ತಪ್ಪುವುದಿಲ್ಲ.

ಆದರೆ, ಬರೀ ಸುತ್ತೋಲೆಯಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ರೋಗಿಗಳಿಗೆ ಜನರಿಕ್ ಔಷಧಿ ಚೀಟಿಯನ್ನು ಬರೆದುಕೊಡದ ಹಾಗೂ ಕ್ಯಾಪಿಟಲ್ ಅಕ್ಷರಗಳಲ್ಲಿ ಚೀಟಿಯನ್ನು ಬರೆಯದ ವೈದ್ಯರನ್ನು ಶಿಕ್ಷಿಸಲು ಕಾನೂನೊಂದನ್ನು ರೂಪಿಸುವುದಾಗಿ ಪ್ರಧಾನಮಂತ್ರಿ ಈ ಬಾರಿ ಘೋಷಿಸಿರುವುದರಿಂದ ಭಾರತೀಯ ವೈದ್ಯಕೀಯ ಮಂಡಳಿ ಹೊರಡಿಸಿದ ಸುತ್ತೋಲೆಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಜನರಿಕ್ ಔಷಧಿಯೆಂದರೆ ಜನಸಾಮಾನ್ಯರ ಭಾಷೆಯಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ಔಷಧಿಗಳು.

ಪೇಟೆಂಟ್ ಮುಗಿದ ಬ್ರಾಂಡೆಡ್ ಔಷಧಿಗಳನ್ನು ಸಣ್ಣಪುಟ್ಟ ಔಷಧಿ ಉತ್ಪಾದಕರು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವುದರಿಂದ ಅವು ಜನರಿಕ್ ಔಷಧವಾಗಿ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರೆಯುತ್ತವೆ. ಈ ಬಗ್ಗೆ ವೈದ್ಯರಿಗೆ ಮಾಹಿತಿ ಇದ್ದರೂ ಅವರು ಈ ಜನರಿಕ್ ಔಷಧಿ ಬರೆದುಕೊಡದೆ ಕಮಿಷನ್ ಆಸೆಗಾಗಿ ದುಬಾರಿ ಬೆಲೆಯ ಬ್ರಾಂಡೆಡ್ ಔಷಧಿಗಳನ್ನೇ ಬರೆದುಕೊಡುತ್ತಾರೆ. ಅದೇ ಮಾದರಿಯ ಬೇರೆ ಔಷಧಿಗಳು ಕಡಿಮೆ ಬೆಲೆಗೆ ಲಭ್ಯವಿದ್ದರೂ ಔಷಧಿ ಅಂಗಡಿಗಳಲ್ಲಿ ವೈದ್ಯರು ಬರೆದ ಔಷಧಿ ಹೊರತುಪಡಿಸಿ ಬೇರೆಯದ್ದನ್ನು ನೀಡುವುದಿಲ್ಲ. ಹೀಗಾಗಿ ಔಷಧಿಕೊಳ್ಳುವ ಶಕ್ತಿ ಇಲ್ಲದ ಬಡರೋಗಿಗಳು ಸಾಕಷ್ಟು ತೊಂದರೆಗೆ ಒಳಗಾಗುತ್ತಾರೆ. ಇದನ್ನು ತಪ್ಪಿಸುವುದಕ್ಕಾಗಿ ವೈದ್ಯರು ಔಷಧದ ಬ್ರಾಂಡ್‌ನ ಹೆಸರು ಬರೆಯುವ ಬದಲು ಅದರ ಜನರಿಕ್ ಹೆಸರನ್ನು ಬರೆಯಬೇಕೆಂದು ಭಾರತೀಯ ವೈದ್ಯಕೀಯ ಮಂಡಳಿ ಸೂಚನೆ ನೀಡಿದೆ.

ಜನರಿಕ್ ಹೆಸರು ಅಂದರೆ ಔಷಧದಲ್ಲಿ ಇರಬೇಕಾದ ರಾಸಾಯನಿಕ ಅಂಶಗಳ ಹೆಸರು. ಉದಾಹರಣೆಗೆ ಪ್ಯಾರಾಸಿಟಾಮಲ್ ಎಂಬುದು ಜ್ವರ, ತಲೆನೋವು ಇತ್ಯಾದಿ ಕಾಯಿಲೆಗೆ ಕೊಡಬೇಕಾದ ಔಷಧಿಯ ರಾಸಾಯನಿಕದ ಹೆಸರು. ಅದನ್ನು ಬರೆಯುವ ಬದಲು ವೈದ್ಯರು ಪ್ಯಾರಾಸಿಟಾಮಲ್ ಅಂಶವಿರುವ ಪೆನೆಡಾಲ್, ಕಾಲ್‌ಪೋಲ್ ಇತ್ಯಾದಿ ಬ್ರಾಂಡೆಡ್ ಔಷಧಿಗಳನ್ನು ಬರೆದುಕೊಡುತ್ತಾರೆ. ಇವು ಸಣ್ಣಪುಟ್ಟ ಕಾಯಿಲೆಗಳಿಗೆ ನೀಡುವ ಔಷಧಿಯೆಂದು ಸುಮ್ಮನಿರಬಹುದು. ಆದರೆ, ದೊಡ್ಡದೊಡ್ಡ ಕಾಯಿಲೆಗಳಿಗೂ ವೈದ್ಯರು ಇದೇ ರೀತಿಯ ಬ್ರಾಂಡೆಡ್ ಔಷಧಿಗಳನ್ನು ಬರೆದುಕೊಡುತ್ತಾರೆ. ಇದನ್ನು ತಪ್ಪಿಸಲು ಭಾರತೀಯ ವೈದ್ಯಕೀಯ ಮಂಡಳಿ ಹೊರಡಿಸಿದ ಸುತ್ತೋಲೆಯಿಂದಲೇ ಸಾಧ್ಯವಿಲ್ಲ. ಅಷ್ಟೇ ಅಲ್ಲದೆ, ಜನರಿಕ್ ಹೆಸರನ್ನು ಮಾತ್ರ ಬರೆಯುವುದರಿಂದ ತೊಂದರೆ ಉಂಟಾಗುವ ಸಂಭವವಿದೆ.

ಔಷಧಿ ಅಂಗಡಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಔಷಧಿಯ ರಾಸಾಯನಿಕಗಳು ಹಾಗೂ ಔಷಧಿಯ ಹೆಸರಿನ ಪರಿಚಯ ಸರಿಯಾಗಿ ಇರದಿದ್ದರೆ ಯಾವ ಔಷಧಿ ಕೊಡಬೇಕೆಂಬುದು ಗೊತ್ತಾಗದೆ ಯಾವುದೋ ಕಾಯಿಲೆಗೆ ಯಾವುದೋ ಔಷಧಿಯನ್ನು ಕೊಡುವ ಸಂಭವವಿದೆ. ಇಲ್ಲವೇ, ವೈದ್ಯರು ಜನರಿಕ್ ಔಷಧಿಯ ಚೀಟಿ ಬರೆದುಕೊಟ್ಟರೂ ಔಷಧಿ ಅಂಗಡಿಯವರು ಕಮಿಷನ್ ಆಸೆಗಾಗಿ ಬ್ರಾಂಡೆಡ್ ಔಷಧಿಗಳನ್ನು ಮಾರಾಟ ಮಾಡುವ ಅಪಾಯವಿದೆ. ಭಾರತೀಯ ವೈದ್ಯಕೀಯ ಮಂಡಳಿಯ ಆದೇಶ ಸರಿಯಾಗಿ ಜಾರಿಗೆ ಬರಬೇಕೆಂದರೆ ಮಾರುಕಟ್ಟೆಯಲ್ಲಿ ಜನರಿಕ್ ಔಷಧಿಗಳ ಪೂರೈಕೆ ಸಾಕಷ್ಟಿರಬೇಕು. ಅದಕ್ಕೂ ಮುನ್ನ ಅವುಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಬೇಕು.

ವೈದ್ಯರು ಮತ್ತು ಔಷಧಿ ಅಂಗಡಿಗಳು ತಮ್ಮ ಬದ್ಧತೆಯನ್ನು ತೋರಿಸಬೇಕು. ಸರಕಾರ ಎಲ್ಲ ಜಿಲ್ಲೆಗಳಲ್ಲಿ ಜನೌಷಧಿ ಮಳಿಗೆಗಳನ್ನು ಆರಂಭಿಸಿದ್ದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ, ಅವುಗಳ ಬಗ್ಗೆ ಜನಸಾಮಾನ್ಯರಿಗೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಮಾಧ್ಯಮಗಳಲ್ಲೂ ಸರಿಯಾಗಿ ಪ್ರಚಾರ ದೊರಕಿಲ್ಲ. ಆದ್ದರಿಂದ ಜನರಿಕ್ ಔಷಧಿಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಅಭಿಯಾನವೊಂದನ್ನು ಸರಕಾರ ಕೈಗೊಳ್ಳಬೇಕಾಗಿದೆ. ಮಧುಮೇಹ, ರಕ್ತದೊತ್ತಡ, ಹೃದ್ರೋಗ, ಮಂಡಿನೋವು ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಜನೌಷಧಿ ಮಳಿಗೆಗಳಲ್ಲಿ ಕಡಿಮೆ ಬೆಲೆಯ ಔಷಧಿಗಳು ಲಭ್ಯವಿವೆ.

ಅಲ್ಲಿ ಇನ್ಸುಲಿನ್ ಮತ್ತು ಇಂಜೆಕ್ಷನ್‌ಗಳು ದೊರೆಯುತ್ತವೆ. ಕಡಿಮೆ ಬೆಲೆಯ ಔಷಧಿಗಳು ಸಾವಿನ ಅಂಚಿನಲ್ಲಿರುವ ಜನಸಾಮಾನ್ಯರಿಗೆ ತಲುಪಿದರೆ ಅವರು ಇನ್ನೊಂದಿಷ್ಟು ಸಮಯ ನೆಮ್ಮದಿಯಿಂದ ಬದುಕಬಹುದು. ಅನೇಕ ಪ್ರಕರಣಗಳಲ್ಲಿ ದುಬಾರಿ ಬೆಲೆಯ ಔಷಧಿಗಳನ್ನು ಖರೀದಿಸಲಾಗದೆ ರೋಗಿಗಳು ಅಸುನೀಗಿದ ಉದಾಹರಣೆಗಳಿವೆ. ಇಂತಹ ಘಟನೆಗಳು ನಡೆಯಬಾರದೆಂದರೆ ಜನರಿಕ್ ಔಷಧಿ ಮಳಿಗೆಗಳು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರವಲ್ಲ ತಾಲೂಕು ಕೇಂದ್ರಗಳಲ್ಲೂ ಆರಂಭವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ವಾಸ್ತವವಾಗಿ ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಆರೋಗ್ಯಸೇವೆ ದುಬಾರಿಯಾಗುತ್ತಿದೆ.

ಪ್ರಜೆಗಳ ಆರೋಗ್ಯ ರಕ್ಷಣೆ ಸರಕಾರದ ಕರ್ತವ್ಯ ಎಂಬುದನ್ನು ಅಧಿಕಾರದಲ್ಲಿರುವವರು ಮರೆತಿದ್ದಾರೆ. ಶಿಕ್ಷಣದಂತೆ ವೈದ್ಯಕೀಯ ಸೇವೆಯೂ ವ್ಯಾಪಾರೀಕರಣಗೊಂಡಿದೆ. ಸರಕಾರಿ ಆಸ್ಪತ್ರೆಗಳಂತೂ ಅವ್ಯವಸ್ಥೆಯ ತಾಣಗಳಾಗಿವೆ. ಈ ಆಸ್ಪತ್ರೆಗಳಿಗೆ ಹೋದರೆ ಅಲ್ಲಿರುವ ಔಷಧಿ ಮಳಿಗೆಗಳಲ್ಲಿ ರೋಗಿಗಳಿಗೆ ಉಚಿತವಾಗಿ ಔಷಧಿ ಕೊಡಬೇಕೆಂದು ಸರಕಾರ ಸೂಚಿಸಿದೆ. ಸರಕಾರಿ ಆಸ್ಪತ್ರೆಗೆ ಪೂರೈಕೆಯಾಗುವ ಔಷಧಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಔಷಧಿ ಅಂಗಡಿಗಳಿಗೆ ಮಾರಾಟ ಮಾಡುವ ದೊಡ್ಡ ಜಾಲವೇ ನಮ್ಮ ದೇಶದ ಮತ್ತು ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಬೇರುಬಿಟ್ಟಿದೆ. ಇದರ ಪರಿಣಾಮವಾಗಿ, ಮುಂಗಡ ಪತ್ರದಲ್ಲಿ ಸರಕಾರ ಆರೋಗ್ಯ ರಕ್ಷಣೆಗೆ ಎಷ್ಟೇ ಕೋಟಿ ರೂ. ಮೀಸಲಿಟ್ಟರೂ ಜನಸಾಮಾನ್ಯರಿಗೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ.

ಆದ್ದರಿಂದ ಸರಕಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರವಲ್ಲ ತಾಲೂಕು ಕೇಂದ್ರಗಳಲ್ಲಿ ಮತ್ತು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಜನರಿಕ್ ಔಷಧಿಯ ಮಳಿಗೆಗಳನ್ನು ಆರಂಭಿಸಬೇಕು. ರೋಗಿಗಳಿಗೆ ಜನರಿಕ್ ಔಷಧಿಗಳನ್ನು ಬರೆದುಕೊಡದ ವೈದ್ಯರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸಲು ಸ್ವಯಂ ಸೇವಾ ಸಂಸ್ಥೆಗಳು ಮತ್ತು ಜನಪರ ಸಂಘಟನೆಗಳು ಮಹತ್ವದ ಪಾತ್ರ ವಹಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News