ಅಶ್ರಫ್ ಹತ್ಯೆ ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ

Update: 2017-06-22 09:18 GMT

ಮಡಿಕೇರಿ, ಜೂ. 22: ಕರಾವಳಿ ಭಾಗದ ಗಲಭೆಗಳಿಗೆ ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ನೇರ ಕಾರಣ ಎಂದು ಸರಕಾರದ ಸಚಿವರುಗಳೆ ಹೇಳಿದ್ದರೂ, ಹಲವಾರು ಆರೋಪಗಳನ್ನು ಹೊಂದಿರುವ ಆತನನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡದೆ ಇರುವುದರಿಂದ ಆಗಾಗ ಗಲಭೆಗಳು ಮರುಕಳಿಸುತ್ತಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ತಿಳಿಸಿದ್ದಾರೆ.

ಬಂಟ್ವಾಳ, ಕಲಾಯಿಯ ಎಸ್‌ಡಿಪಿಐ ವಲಯ ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಅವರ ಹತ್ಯೆಯನ್ನು ಖಂಡಿಸಿ ನಗರದ ಇಂಧಿರಾಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರ ಚುನಾವಣೆ ಹಾಗೂ ಅಲ್ಪಸಂಖ್ಯಾತರ ಹಬ್ಬಗಳ ಸಂದರ್ಭದಲ್ಲಿ ಕೋಮು ಗಲಭೆ ಸೃಷ್ಟಿಸಲು ಈ ಹಿಂದಿನಿಂದಲೂ ಸಂಚು ರೂಪಿಸುತ್ತಾ ಬಂದಿದ್ದು, ಹಲವು ಗಲಭೆಗಳು, ಕೊಲೆ ಪಾತವೂ ನಡೆದಿವೆ. ನಾವು ಅಧಿಕಾರಕ್ಕೆ ಬಂದರೆ ತಿಂಗಳೊಳಗೆ ಪ್ರಭಾಕರ ಭಟ್ಟ ಅನ್ನು ಬಂಧಿಸಲಿದ್ದೇವೆ ಎಂದು ಕಳೆದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಹೇಳಿದ್ದು, ನಾಲ್ಕು ವರ್ಷ ಕಳೆದರೂ ಬಂಧಿಸದೆ ಗಲಭೆ ಮರುಕಳಿಸಲು ಸರಕಾರವೂ ಕಾರಣವಾಗಿದೆ ಎಂದರು.

ಬಡ ರಿಕ್ಷಾ ಚಾಲಕ ಅಶ್ರಫ್ ಕೊಲೆಗಡುಕರನ್ನು ಕೂಡಲೆ ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿಸಿ, ಜಾಮೀನು ಸಿಗದಂತೆ ನೋಡಬೇಕು. ಸಂಘಪರಿವಾರದ ಹಿನ್ನೆಲೆಯ ಕೊಲೆಗೆಡುಕರಿಗೆ ಸೂಕ್ತ ಶಿಕ್ಷೆ ಆಗದಿರುವುದೇ ಆಗಾಗ ಕೊಲೆ ನಡೆಯುತ್ತಿರಲು ಮುಖ್ಯ ಕಾರಣ. ಕರಾವಳಿಯಲ್ಲಿ ಒಂದೇ ತಿಂಗಳಿನಲ್ಲಿ ಒಂದು ಕೊಲೆ, ಮೂರು ಚೂರಿ ಇರಿತ ಹಾಗೂ ಒಂದು ಕೊಲೆ ಯತ್ನ ಸಂಘ ಪರಿವಾರದಿಂದ ನಡೆದಿದೆ ಎಂದು ಆರೋಪಿಸಿದ ಅವರು, ಅಶ್ರಫ್ ಕಲಾಯಿ ಅವರ ಕುಟುಂಬಕ್ಕೆ ಸರಕಾರ ರೂ 25 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ನೀಡಿದರು. ಈ ಸಂದರ್ಭ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಉಪಾಧ್ಯಕ್ಷ ಲಿಯಾಕತ್ ಅಲಿ, ಕೋಶಾಧಿಕಾರಿ ಇಬ್ರಾಹೀಂ, ಕಾರ್ಯದರ್ಶಿ ಬಶೀರ್ ಅಲಿ, ಪಿಎಫ್‌ಐ ಜಿಲ್ಲಾಧ್ಯಕ್ಷ ಹ್ಯಾರಿಸ್, ನಗರಸಾ ಸದಸ್ಯರಾದ ಪೀಟರ್, ಮನ್ಸೂರ್, ಪ್ರಮುಖರಾದ ನೂರುದ್ದೀನ್, ಶೌಕತ್ ಅಲಿ, ಶಫಿ ಸೇರಿದಂತೆ ಮತ್ತಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News