ಬದಲಾಗದ ಶಿವಮೊಗ್ಗ ಆಸ್ಪತ್ರೆಯ ವ್ಯವಸ್ಥೆ: ಡಿ.ಸಿ. ಭೇಟಿಯ ವೇಳೆ ಬೆಳಕಿಗೆ ಬಂದ ಅವ್ಯವಸ್ಥೆಗಳು!

Update: 2017-06-22 12:58 GMT

ಶಿವಮೊಗ್ಗ, ಜೂ. 22: ವ್ಹೀಲ್ ಚೇರ್ ನೀಡದ ಕಾರಣದಿಂದ ವಯೋವೃದ್ದ ಪತಿಯ ಕಾಲುಗಳನ್ನು ಹಿಡಿದು ವೃದ್ದ ಪತ್ನಿಯು ದರದರನೇ ಎಳೆದೊಯ್ಯುತ್ತಿರುವ ವೀಡಿಯೋ ಬೆಳಕಿಗೆ ಬಂದ ನಂತರ ಸಾರ್ವಜನಿಕ ವಲಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ವ್ಯವಸ್ಥೆ ಸದ್ಯಕ್ಕೆ ಸುಧಾರಣೆಯಾಗುವ ಲಕ್ಷಣಗಳು ಕಾಣುತ್ತಿಲ್ಲವಾಗಿದೆ.

ಗುರುವಾರ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‌ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ವೇಳೆ ಹಲವು ರೀತಿಯ ಲೋಪದೋಷಗಳು ಕಂಡುಬಂದಿವೆ. ಇದಕ್ಕೆ ಜಿಲ್ಲಾಧಿಕಾರಿಗಳು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ಸರ್ಕಾರಿ ಮೆಡಿಕಲ್ ಕಾಲೇಜ್ (ಸಿಮ್ಸ್) ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.

ದಾಖಲೆಗಳಲ್ಲಿ: ಮೆಗ್ಗಾನ್ ಆಸ್ಪತ್ರೆಯಲ್ಲಿ ಬಯೋ ಮೆಟ್ರಿಕ್ ಹಾಜರಿ ವ್ಯವಸ್ಥೆಯಿದ್ದು ಬೆಳಿಗ್ಗೆ 9 ಹಾಗೂ ಸಂಜೆ 4 ಗಂಟೆಗೆ ಹಾಜರಿ ನಮೂದಿಸಲಾಗುತ್ತದೆ. ಆದರೆ ಈ ಅವಧಿಯ ನಡುವೆ ವೈದ್ಯರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ದಾಖಲೆಯಿಡದಿರುವುದು ಡಿ.ಸಿ.ಯವರ ಗಮನಕ್ಕೆ ಬಂದಿತು.

ದಾಖಲೆಗಳನ್ನು ಸಮರ್ಪಕವಾಗಿಡದಿರುವುದಕ್ಕೆ ತೀವ್ರ ಅಸಮಾಧಾನ: ಡಾ. ಎಂ. ಲೋಕೇಶ್‌ರವರು, ದಾಖಲೆಗಳ ಸಮರ್ಪಕ ನಿರ್ವಹಣೆ ಮಾಡುವಂತೆ ಸಂಬಂಧಿಸಿದವರಿಗೆ ತಾಕೀತು ಮಾಡಿದ್ದಾರೆ.

ಔಷಧ ಕೊರತೆ: ಆಸ್ಪತ್ರೆಯ ಜನರಿಕ್ ಔಷಧ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಜನರಿಕ್  ಔಷಧಗಳ ದಾಸ್ತಾನು ಕೊರತೆಯಿರುವುದು ಕಂಡುಬಂದಿತು. ಈ ಕುರಿತಂತೆ ವರದಿ ನೀಡುವಂತೆ ಸಿಮ್ಸ್ ಡೀನ್‌ಗೆ ಆದೇಶಿಸಿದ್ದಾರೆ. ಜೊತೆಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್ ಆವರಣದಲ್ಲಿರುವ ಅಸ್ವಚ್ಚತೆಯ ವಾತಾವರಣ ಸರಿಪಡಿಸುವಂತೆ ಸೂಚಿಸಿದ್ದಾರೆ.

ಸಭೆ: ತದನಂತರ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಡಾ. ಎಂ. ಲೋಕೇಶ್‌ರವರು ಮೆಡಿಕಲ್ ಕಾಲೇಜ್, ಆಸ್ಪತ್ರೆಯ ಪ್ರಮುಖರೊಂದಿಗೆ ಸಭೆ ನಡೆಸಿದರು. ಕೆಲ ದಿನಗಳ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನ ಮಾಡಲಾಗಿದೆಯೇ ಎಂಬುವುದರ ಬಗ್ಗೆ ಚರ್ಚೆ ನಡೆಸಿದರು. ’

ಆಸ್ಪತ್ರೆಯ ಜನರಿಕ್ ಮೆಡಿಸಿನ್ ಮುಖ್ಯಸ್ಥರ ಮೇಲೆ ದೂರುಗಳು ಬಂದಿದ್ದು, ಇವರ ಕಾರ್ಯವೈಖರಿ ಪರಿಶೀಲಿಸಬೇಕು. ಆಸ್ಪತ್ರೆಯ ಪ್ರಸೂತಿ ಮತ್ತು ಸ್ತೀ ರೋಗ ವಿಭಾಗದಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವ ಆರೋಪಗಳಿವೆ. ಅಲ್ಲಿನ ಸಿಬ್ಬಂದಿಗಳ ಕಾರ್ಯವೈಖರಿ ಬದಲಾಯಿಸಿ. ಈ ಬಗ್ಗೆ ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಡೀನ್‌ಗೆ ಡಿ.ಸಿ.ಯವರು ಆದೇಶಿಸಿದ್ದಾರೆ.

ಅರವಳಿಕೆ ವಿಭಾಗದಲ್ಲಿ ಸಿಬ್ಬಂದಿ ಕೊರತೆ, ಕಣ್ಣಿನ ಚಿಕಿತ್ಸೆಗೊಳಗಾದವರಿಗೆ ಉಚಿತವಾಗಿ ಕನ್ನಡಕ ವಿತರಣೆ, ಆಸ್ಪತ್ರೆಯಲ್ಲಿರುವ 5 ಆ್ಯಂಬುಲೆನ್ಸ್‌ಗಳ ಸೇವೆ ಸಮರ್ಪಕವಾಗಿ ನಿರ್ವಹಣೆ ಮಾಡುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಿಮ್ಸ್ ಆಡಳಿತ ಮಂಡಳಿಗೆ ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡುವುದೇಕೆ?: ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸುಸಜ್ಜಿತ ವ್ಯವಸ್ಥೆಯಿದ್ದರೂ ಸಹ ರೋಗಿಗಳಿಗೆ ಹೆಚ್ಚಿನ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ತಪಾಸಣೆಗೆ ಕಳುಹಿಸಿ ಕೊಡುತ್ತಿರುವ ದೂರುಗಳಿವೆ. ಈ ಸಂಬಂಧ ಡೀನ್‌ರವರು ಆಸ್ಪತ್ರೆಯ ಪ್ರತಿಯೊಂದು ವಿಭಾಗದ ಮುಖ್ಯಸ್ಥರುಗಳಿಂದ ವರದಿಯನ್ನು ಪಡೆದುಕೊಳ್ಳಬೇಕು. ಈ ಬಗ್ಗೆ ತಮಗೆ ಸೂಕ್ತ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‌ರವರು ಡೀನ್‌ರವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೆಪಿಎಂಇ ಕಾಯ್ದೆಯಂತೆ ಖಾಸಗಿ ವೈದ್ಯ ವೃತ್ತಿಗೆ ಪ್ರಾಕ್ಟೀಸ್ ಮಾಡುವುದು, ಡಿ.ಹೆಚ್.ಓ. ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳದಿರುವ ಆಸ್ಪತ್ರೆಯ ವೈದ್ಯರುಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಡೀನ್‌ರವರಿಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News