ಮದುವೆಗೆ ಅವಕಾಶ ನೀಡಿ: ವಿಧವೆಯರ ಗ್ರಾಮದ ಒಕ್ಕೊರಲ ಮೊರೆ

Update: 2017-06-23 04:30 GMT

ಡೆಹ್ರಾಡೂನ್, ಜೂ. 23: ನಾಲ್ಕು ವರ್ಷದ ಹಿಂದೆ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಜಲಸಮಾಧಿಯಾದ ಪುರುಷರ ಪತ್ನಿಯರು ತಮ್ಮ ಮರು ವಿವಾಹಕ್ಕೆ ನೆರವಾಗಿ ಎಂದು ಮೊರೆ ಇಟ್ಟಿದ್ದಾರೆ.

ವಿಧವೆಯರ ಗ್ರಾಮ ಎಂದೇ ಪರಿಚಿತವಾಗಿರುವ ದೇವಲಿ- ಭಂಗಿರಾಮ್‌ನಲ್ಲಿ 2013ರ ಪ್ರವಾಹದಲ್ಲಿ 54 ಮಂದಿ ಕೊಚ್ಚಿಕೊಂಡು ಹೋಗಿದ್ದರು. ಈ ಪೈಕಿ 32 ಮಂದಿ ವಿವಾಹಿತರಾಗಿದ್ದು, ಈ ಪುಟ್ಟ ಪ್ರದೇಶದಲ್ಲೇ 32 ಮಂದಿ ವಿದವೆಯರಿದ್ದಾರೆ.

ದುರಂತದಲ್ಲಿ ಮೃತಪಟ್ಟ ಬಹುತೇಕ ಪುರುಷರು ಕೇದಾರನಾಥ ಮಂದಿರದ ಅರ್ಚಕ- ಸಹಾಯಕರಾಗಿದ್ದು, ಅವರ ಕುಟುಂಬಗಳು ದಯನೀಯ ಸ್ಥಿತಿಯಲ್ಲಿವೆ. ಸಾಮಾಜಿಕ ಕಟ್ಟುಪಾಡುಗಳು, ಮರುವಿವಾಹವಾಗಿ ಬದುಕು ಕಟ್ಟಿಕೊಳ್ಳುವ ಆಸೆಗೂ ತಣ್ಣೀರೆರಚಿವೆ.

"ಗ್ರಾಮದ ವಿಧವೆಯರಲ್ಲಿ ಬಹುತೇಕ ಮಂದಿ ಮರು ವಿವಾಹವಾಗುವ ಇಚ್ಛೆ ಹೊಂದಿದ್ದಾರೆ. ಆದರೆ ಕಟ್ಟುಪಾಡುಗಳ ಕಾರಣದಿಂದ ಎಲ್ಲರೂ ತಮ್ಮ ಆಕಾಂಕ್ಷೆಗಳನ್ನು ಹತ್ತಿಕ್ಕಿಕೊಂಡಿದ್ದಾರೆ" ಎಂದು ದುರಂತದಲ್ಲಿ ಪತಿಯನ್ನು ಕಳೆದುಕೊಂಡ ರಚನಾ ಶುಕ್ಲಾ (28) ಹೇಳುತ್ತಾರೆ. ಇವರು ಪ್ರಸ್ತುತ ಡೆಹ್ರಾಡೂನ್‌ನಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ.

"ವಿಧವೆಯರ ಪುನರ್ವಸತಿಗೆ ನೆರವು ನೀಡುತ್ತಿರುವ ಸಂಘಟನೆಗಳನ್ನು ಎಲ್ಲರೂ ಹೊಗಳುತ್ತಿದ್ದಾರೆ. ಆದರೆ ವಿಧವೆಯರಿಗೆ ಈಗ ಹಣಕಾಸು ನೆರವಿಗಿಂತ ಹೆಚ್ಚಾಗಿ, ಮರುವಿವಾಹದ ಬಗೆಗಿನ ಗ್ರಾಮಸ್ಥರ ಮನೋಭಾವ ಬದಲಾಗಬೇಕಾದ ಅನಿವಾರ್ಯತೆ ಇದೆ".

ಪತಿ ಮರಣಕ್ಕಿಂತ ಮೊದಲು ಮಕ್ಕಳಾಗಿರದ ಯುವತಿಯರಿಗೆ ಮರುವಿವಾಹಕ್ಕೆ ಅವಕಾಶ ನೀಡಬೇಕು ಎನ್ನುವುದು ಮತ್ತೊಬ್ಬ ವಿಧವೆ ರಜನಿ ದೇವಿ (31) ಅವರ ಅನಿಸಿಕೆ. ಇವರಿಗೆ 8 ಮತ್ತು 11 ವರ್ಷದ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿರುವ ಮಹಿಳೆಯರು ಮರುವಿವಾಹಕ್ಕೆ ಮುಂದಾಗುವ ಸಾಧ್ಯತೆ ಇಲ್ಲ ಎನ್ನುವುದು ಅವರ ಅಭಿಪ್ರಾಯ. ಎಳೆ ವಯಸ್ಸಿನಲ್ಲೇ ಗಂಡಂದಿರನ್ನು ಕಳೆದುಕೊಂಡಿರುವ ಯುವತಿಯರ ಮರುವಿವಾಹಕ್ಕೆ ಅವಕಾಶ ನಿರಾಕರಿಸುವುದು ನಿಜಕ್ಕೂ ಕ್ರೂರ ನಿರ್ಧಾರ ಎಂದು ಅವರು ಹೇಳುತ್ತಾರೆ.

ಬ್ರಾಹ್ಮಣರೇ ಅಧಿಕ ಇರುವ ದೇವಲಿ ಗ್ರಾಮದ ಬಹುತೇಕ ಮಂದಿ ಕೇದಾರನಾಥ ಮಂದಿರದಲ್ಲಿ ಅರ್ಚಕ ವೃತ್ತಿಯಲ್ಲಿದ್ದು, ಈ ಸಂಪ್ರದಾಯಸ್ಥ ಗ್ರಾಮದಲ್ಲಿ ವಿಧವಾ ವಿವಾಹಕ್ಕೆ ವ್ಯಾಪಕ ವಿರೋಧ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News