ನಾಲ್ಕು ಮುಖ್ಯಮಂತ್ರಿಗಳು ಶಿಕ್ಷಕರಿಗೆ ಹಸೀಸುಳ್ಳು ಹೇಳಿದ್ದಾರೆ: ತಿಮ್ಮಯ್ಯ ಪುರ್ಲೆ ಆರೋಪ

Update: 2017-06-23 12:08 GMT

ಚಿಕ್ಕಮಗಳೂರು, ಜೂ.23: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇದುವರೆಗಿನ ನಾಲ್ಕೂ ಮುಖ್ಯಮಂತ್ರಿಗಳು ಹೋರಾಟ ನಿರತ ಶಿಕ್ಷಕರಿಗೆ ಹಸೀಸುಳ್ಳು ಹೇಳಿದ್ದಾರೆ ಎಂದು ರಾಜ್ಯ ಪಿ.ಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಆರೋಪಿಸಿದರು.

ಅವರು ರಾಜ್ಯ ಸಹಕಾರ ಮಹಾಮಂಡಳ, ಡಿ.ಸಿ.ಸಿ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಯೂನಿಯನ್ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಿ.ಯು ಉಪನ್ಯಾಸಕರು ಸಂಘದ ನೇತೃತ್ವದಲ್ಲಿ ಇದುವರೆಗೆ 3 ಬಾರಿ ಹೋರಾಟ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿ 15 ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ ಚಳುವಳಿಯನ್ನು ಹಿಂಪಡೆಯುವಂತೆ ಮನವೊಲಿಸಿದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಮತ್ತು ಸಿದ್ದರಾಮಯ್ಯ ನಂತರ ತಮ್ಮ ಮಾತಿಗೆ ತಪ್ಪಿದ್ದಾರೆ ಎಂದು ದೂರಿದರು.

ಶಿಕ್ಷಕರು ಪ್ರತಿ ಬಾರಿ ಹೋರಾಟ ನಡೆಸುವಾಗಲೂ ಇದೇ ಸುಳ್ಳುಗಳನ್ನು ಹೇಳಿ ನಂಬಿಸಿ ಚಳುವಳಿಯನ್ನು ಹಿಂಪಡೆಯುಂತೆ ಮಾಡಿರುವ 4 ಮುಖ್ಯಮಂತ್ರಿಗಳು ನಂತರ ಇದವರೆಗೂ ಯಾವುದೇ ಬೇಡಿಕೆಗಳನ್ನೂ ಈಡೇರಿಸಿಲ್ಲ. ಈಗ ಹೋಗಿ ಕೇಳಿದರೆ ಆ ವಿಷಯ ತಮಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ ಎಂದರು.
 

ಇಡೀ ರಾಜ್ಯದಲ್ಲಿ ಪಿ.ಯು ಉಪನ್ಯಾಸಕರು ಮತ್ತು ಶಿಕ್ಷಕರು ಹೆಚ್ಚು ಸಂಬಳ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಪದವಿ ಕಾಲೇಜುಗಳ ಉಪನ್ಯಾಸಕರುಗಳು 1 ಲಕ್ಷ, 2 ಲಕ್ಷ ಸಂಬಳ ಪಡೆಯುತ್ತಿರುವಾಗ ನಾವುಗಳು ಕೇವಲ 50-60 ಸಾವಿರದಷ್ಟು ಕನಿಷ್ಠ ವೇತನ ಪಡೆಯುತ್ತಿದ್ದೇವೆ. ಇದರಿಂದಾಗಿ ಆರ್ಥಿಕ ಸಂಕಷ್ಠವನ್ನು ಎದುರಿಸುತ್ತಿದ್ದೇವೆ. ನಮ್ಮ ಮಕ್ಕಳನ್ನು ದುಬಾರಿ ಹಣ ತೆತ್ತು ಓದಿಸಲಾಗದಂತಹ ಪರಿಸ್ಥಿತಿಯಲ್ಲಿದ್ದೇವೆ ಎಂದು ಅಳಲು ತೋಡಿಕೊಂಡರು.  

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಎಲ್.ಭೋಜೇಗೌಡ ಮಾತನಾಡಿ, ಶಿಕ್ಷಕರಿಗೆ ತರಬೇತಿ ನೀಡುವುದು ಮಹಾಮಂಡಳದ ಪ್ರಮುಖ ಗುರಿಯಾಗಿದ್ದು ಹುಬ್ಬಳ್ಳಿ ಬೆಳಗಾಂ ಸೇರಿದಂತೆ ರಾಜ್ಯದ ವಿವಿಧೆಡೆ ತರಬೇತಿ ಕೇಂದ್ರಗಳನ್ನು ಅನೇಕ ವರ್ಷಗಳಿಂದ ನಡೆಸುತ್ತಿದೆ. ಭವಿಷ್ಯಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಉನ್ನತ ಶಿಕ್ಷಣ ಮಾಡುವ ರೈತರ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ಮತ್ತು ಆರ್ಥಿಕ ಸಹಾಯವನ್ನು ರಾಜ್ಯ ಸಹಕಾರ ಮಹಾಮಂಡಳದಿಂದ ನೀಡಲಾಗುವುದು ಎಂದರು.

 ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ ಅಧ್ಯಕ್ಷತೆ ವಹಿಸಿದ್ದರು. ಸೇವೆಯಿಂದ ನಿವೃತ್ತರಾದ ಶಿಕ್ಷಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಎಂಇಎಸ್ ಕಾಲೇಜಿನ ಕಾರ್ಯದರ್ಶಿ ಶಂಕರನಾರಾಯಣ ಭಟ್ ಮತ್ತು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಉಪನ್ಯಾಸ ನೀಡಿದರು.
 ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ.ಮಂಜುನಾಥ್, ರಾಜ್ಯ ಪಿ.ಯು ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ನಿಂಗೇಗೌಡ, ಜಿಲ್ಲಾಧ್ಯಕ್ಷ ಎಂ.ಡಿ.ಸುದರ್ಶನ್, ಸಹಕಾರ ಯೂನಿಯನ್ ನ ಅಧ್ಯಕ್ಷ ಕೆ.ಗೋಪಾಲ್, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಅಧ್ಯಕ್ಷ ಕೆ.ಹೆಚ್.ಚಂದ್ರಶೇಖರ ಆರಾಧ್ಯ, ಜಿಲ್ಲಾ ಮುಖ್ಯೋಪಧ್ಯಾಯರ ಸಂಘದ ಅಧ್ಯಕ್ಷ ಟಿ.ಆರ್.ಲಕ್ಕಪ್ಪ, ಜಿಲ್ಲಾ ಪ್ರೌಢಶಾಲಾ ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಪಿ.ಕೃಷ್ಣೇಗೌಡ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಷಡಕ್ಷರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News