ಹುದ್ದೆ ಖಾಯಂಗೆ ಆಗ್ರಹಿಸಿ ವಸತಿ ನಿಲಯ ಕಾರ್ಮಿಕರ ಪ್ರತಿಭಟನೆ

Update: 2017-06-23 12:13 GMT

ಮಡಿಕೇರಿ ಜೂ. 23: ವಸತಿ ನಿಲಯಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರನ್ನು ವಜಾಗೊಳಿಸಿ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರಮುಖರು ಸರಕಾರದ ಕ್ರಮವನ್ನು ಖಂಡಿಸಿದರು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನೇ ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಸಂಚಾಲಕರಾದ ಮಲ್ಲಿಕಾರ್ಜುನ ಮಾತನಾಡಿ, ಈ ಹಿಂದೆ ಅನೇಕ ಬಾರಿ ನಡೆಸಿದ ಹೋರಾಟದ ಫಲವಾಗಿ ಕೆಲವು ಬೇಡಿಕೆಗಳಿಗಷ್ಟೇ ಸರಕಾರ ಸ್ಪಂದಿಸಿದ್ದು, ಉಳಿದ ಬೇಡಿಕೆಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.   ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಖಾಯಮಾತಿಗೆ ಅರ್ಹರಾಗಿದ್ದಾರೆ. ಆದ್ದರಿಂದ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಹುದ್ದೆಗಳಲ್ಲೇ ಅವರನ್ನು ಮುಂದುವರಿಸಿ ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು.

ವಿದ್ಯಾರ್ಹತೆ ಇಲ್ಲದ ನೌಕರರ ಸಮಸ್ಯೆಯನ್ನು ಬಗೆಹರಿಸಲು ಅವರು ಇಲ್ಲಿಯವರೆಗೆ ನೀಡಿರುವ ಸೇವೆಯನ್ನು ಪರಿಗಣಿಸಿ ಸೇವೆಯಲ್ಲಿ ಮುಂದುವರೆಸಬೇಕು. 2014 ರಲ್ಲಿ ತಿದ್ದುಪಡಿ ಗೊಂಡ ಹೊಸ ನೇಮಕಾತಿ ನಿಯಮಗಳಿಂದ ಹೊರಗಿಟ್ಟು ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು. ಸೇವೆಯನ್ನು ಖಾಯಂಗೊಳಿಸಲು ಸಾಧ್ಯವಾಗದಿದ್ದಲ್ಲಿ ನಿವೃತ್ತಿಯ ವಯಸ್ಸಿನವರೆಗೆ ಈಗ ನಿರ್ವಹಿಸುತ್ತಿರುವ ಹುದ್ದೆಗಳಲ್ಲಿಯೇ ಮುಂದುವರೆಸಬೇಕು.
ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆಯ ಅನ್ವಯ ಈ ನೌಕರರಿಗೆ ಖಾಯಂ ನೌಕರರಷ್ಟೇ ವೇತನ ಹಾಗೂ ಮತ್ತಿತರ ಸೌಕರ್ಯಗಳನ್ನು ನೀಡಿ ನಿವೃತ್ತಿಯವರೆಗೆ ಸೇವಾ ಅವಕಾಶ ನೀಡಬೇಕು, ಹೊರಗುತ್ತಿಗೆ ಪದ್ದತಿಯನ್ನು ಕೈಬಿಟ್ಟು ಇಲಾಖೆಯಿಂದಲೇ ನೇರವಾಗಿ ವೇತನವನ್ನು ಪಾವತಿಸಬೇಕು ಎಂದು ಸೋಮಶೇಕರ್ ಯಾದಗಿರಿ ಒತ್ತಾಯಿಸಿದರು.

ಪ್ರತಿಭಟನಾಕಾರರು ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರಕಾರ ಸಲ್ಲಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News