ಬಗರ್‌ಹುಕುಂ ಸಾಗುವಳಿ ಚೀಟಿ ನೀಡಲು ರೈತನಿಂದ ಲಂಚ: ತಹಶೀಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ!

Update: 2017-06-23 13:12 GMT

ಶಿವಮೊಗ್ಗ, ಜೂ. 23: ಬಗರ್‌ಹುಕುಂ ಸಾಗುವಳಿ ಜಮೀನಿಗೆ ಹಕ್ಕುಪತ್ರ ನೀಡಲು ರೈತರೊಬ್ಬರಿಂದ 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್ (ಆರ್.ಐ.) ರನ್ನು ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.)ದ ಪೊಲೀಸರು ಶುಕ್ರವಾರ ಬೆಳಗ್ಗೆ ರೆಡ್‌ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.

ಇದಾದ ನಂತರ ಆರ್.ಐ.ಗೆ ಲಂಚದ ಮೊತ್ತ ನೀಡುವಂತೆ ರೈತನಿಗೆ ಸೂಚಿಸಿದ್ದ ತಹಶೀಲ್ದಾರ್‌ರನ್ನು ಕೂಡ ಎ.ಸಿ.ಬಿ. ಪೊಲೀಸ್ ತಂಡ ಬಂಧಿಸಿದೆ. ತಹಶೀಲ್ದಾರ್ ಕೇಶವಮೂರ್ತಿ ಹಾಗೂ ಹೊಳಲೂರು ವೃತ್ತದ ಆರ್.ಐ. ಶಶಿಧರ ಭಟ್ ಬಂಧಿತ ಅಧಿಕಾರಿಗಳೆಂದು ಗುರುತಿಸಲಾಗಿದೆ.

ಇವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎ.ಸಿ.ಬಿ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎ.ಸಿ.ಬಿ. ಎಸ್.ಪಿ. ಪುಟ್ಟಮಾದಯ್ಯ, ಡಿವೈಎಸ್‌ಪಿ ಚಂದ್ರಪ್ಪ, ಇನ್ಸ್‌ಪೆಕ್ಟರ್ ಬಸವರಾಜ್ ಮತ್ತವರ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

ಎ.ಸಿ.ಬಿ. ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಯಲ್ಲಿ ತಹಶೀಲ್ದಾರ್‌ ಎ.ಸಿ.ಬಿ. ಬಲೆಗೆ ಬಿದ್ದಿದ್ದು ಇದೇ ಪ್ರಥಮವಾಗಿದೆ.

ಲಂಚಕ್ಕೆ ಒತ್ತಾಯ: ಶಿವಮೊಗ್ಗದ ವಿನೋಬನಗರದ ನಿವಾಸಿಯಾದ ನಾಗರಾಜ್‌ ನಾಯ್ಕಾ ಪ್ರಕರಣದ ದೂರು ದಾರರಾಗಿದ್ದಾರೆ. ತಾಲೂಕಿನ ಕುಂಚೇನಹಳ್ಳಿ ಗ್ರಾಮದಲ್ಲಿ 4.30 ಎಕರೆ ಬಗರ್‌ಹುಕುಂ ಜಮೀನು ಹೊಂದಿದ್ದರು. ನಿಯಾಮಾನುಸಾರ ಸಾಗುವಳಿ ಚೀಟಿ ಕೋರಿ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ತಾಲೂಕು ಆಡಳಿತದ ಅಧಿಕಾರಿಗಳು ಹಕ್ಕುಪತ್ರ ನೀಡಲು ಸತಾಯಿಸುತ್ತಿದ್ದರು. ಜಮೀನಿಗೆ ಹಕ್ಕು ಪತ್ರ ನೀಡಬೇಕಾದರೆ 2 ಲಕ್ಷ ರೂ. ನೀಡುವಂತೆ ತಹಶೀಲ್ದಾರ್ ಕೇಶವಮೂರ್ತಿ ಹಾಗೂ ರೆವಿನ್ಯೂ ಇನ್ಸ್‌ಪೆಕ್ಟರ್ ಶಶಿಧರ ಭಟ್‌ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ 1 ಲಕ್ಷ ರೂ. ನೀಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಾಗರಾಜ್‌ ನಾಯ್ಕಾ ಎ.ಸಿ.ಬಿ. ಪೊಲೀಸರಿಗೆ ದೂರು ನೀಡಿದ್ದು, ಇದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಹಣ ಸ್ವೀಕಾರ: ನಾಗರಾಜ್‌ ನಾಯ್ಕಾ ಶುಕ್ರವಾರ ಬೆಳಗ್ಗೆ 50 ಸಾವಿರ ರೂ. ಹಣದೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿ, ತಹಶೀಲ್ದಾರ್‌ ರಿಗೆ ಪೋನ್ ಮಾಡಿ ಮೊದಲ ಕಂತಾಗಿ 50 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ. ತಹಶೀಲ್ದಾರ್‌ ಆರ್.ಐ. ಶಶಿಧರ ಭಟ್‌ಗೆ ಹಣ ನೀಡುವಂತೆ ಸೂಚಿಸಿದ್ದಾರೆ.

ಗಾಂಧಿನಗರದ ಆಟೋ ನಿಲ್ದಾಣದ ಬಳಿಯ ಹೋಟೆಲ್‌ವೊಂದರ ಸಮೀಪ ನಾಗರಾಜ್‌ನಾಯ್ಕಾರವರಿಂದ 50 ಸಾವಿರ ರೂ. ಪಡೆಯುತ್ತಿದ್ದ ಶಶಿಧರ ಭಟ್‌ರನ್ನು ಅಲ್ಲಿಯೇ ಇದ್ದ ಎ.ಸಿ.ಬಿ. ಪೊಲೀಸರು ಬಲೆಗೆ ಬೀಳಿಸಿಕೊಂಡಿದ್ದಾರೆ. ಇದಾದ ನಂತರ ನಿವಾಸದಲ್ಲಿದ್ದ ತಹಶೀಲ್ದಾರ್‌ ರನ್ನು ವಿಚಾರಣೆಗೆಂದು ಎ.ಸಿ.ಬಿ. ಠಾಣೆಗೆ ಕರೆಯಿಸಿಕೊಂಡು, ಅಲ್ಲಿಯೇ ಅವನ್ನು ಬಂಧನಕ್ಕೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News