ಮಹದಾಯಿ ಹೋರಾಟದ ಮುಖಂಡನ ಕೊಲೆಗೆ ಯತ್ನ: ದೂರು
Update: 2017-06-23 19:51 IST
ಗದಗ, ಜೂ. 23: ಮಹದಾಯಿ ಹೋರಾಟದ ಮುಖಂಡನೋರ್ವನ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ಕಳಸಾ ಬಂಡೂರಿ ಹಾಗೂ ಮಹಾದಾಯಿ ನೀರಿಗಾಗಿ ಹೋರಾಟ ಮಾಡುತ್ತಿದ್ದ ಗದಗ ಜಿಲ್ಲೆ ನರಗುಂದ ಪಟ್ಟಣದ ಅಂದಾನಗೌಡ ಪಾಟೀಲ ಎಂಬವರ ಮೇಲೆ ಮೂವರ ಯುವಕರ ಗುಂಪು ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದೆ ಎಂದು ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಡರಾತ್ರಿ ಮೂವರು ದುಷ್ಕರ್ಮಿಗಳು ಅಂದಾನಗೌಡರ ಮನೆ ಬಾಗಿಲು ಬಡಿದು, ಹೋರಾಟ ವೇದಿಕೆಯಲ್ಲಿ ಗಲಾಟೆ ನಡೆದಿದೆ ಎಂದು ತಿಳಿಸಿದ್ದು, ಬಾಗಿಲು ತೆಗೆಯುತ್ತಿದ್ದಂತೆ ಓರ್ವ ಯುವಕ ಏಕಾಏಕಿ ಖಾರದ ಪುಡಿ ಎರಚಿದ್ದು, ಇದರಿಂದ ಅಂದಾನಗೌಡ ಜೋರಾಗಿ ಕೂಗಿ ಕೊಳ್ಳುತ್ತಿದ್ದಂತೆ ದುಷ್ಕರ್ಮಿಗಳು ಘಟನಾ ಸ್ಥಳದಿಂದ ಪರಾರಿಯಾದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.