ಎಸಿಬಿ ಅಧಿಕಾರಿಗಳ ತಂಡದಿಂದ ದಾಳಿ: ಅಕ್ರಮ ಆಸ್ತಿ ಪತ್ತೆ

Update: 2017-06-23 16:36 GMT

ದಾವಣಗೆರೆ, ಜೂ. 23: ಎಸಿಬಿ ಎಸ್ಪಿ ಪುಟ್ಟ ಮಾದಯ್ಯ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ  ದಾಳಿ ನಡೆಸಿದ ಅಧಿಕಾರಿಗಳ ತಂಡ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಎಚ್.ಎಸ್. ಜಯ ಪ್ರಕಾಶ್ ಅವರ ಮನೆಗೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ.

ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ನಿವಾಸ, ಚನ್ನಗಿರಿ ತಾಲೂಕು ಹೊದಿಗೆರೆ, ದಾಗಿನಕಟ್ಟೆ ಮತ್ತು ಬೆಂಗಳೂರು ಸೇರಿದಂತೆ ನಾಲ್ಕು ಕಡೆ ಎಸಿಬಿ ತಂಡ ಏಕಕಾಲಕ್ಕೆ ದಾಳಿ ನಡೆಸಿದ್ದು, ಆಸ್ತಿ ದಾಖಲೆ ಪರಿಶೀಲಿಸಿದೆ ಎಂದು ತಿಳಿದುಬಂದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಮನೆ, ಜಮೀನಿನ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.

ಈ ಮೊದಲು ಇವರು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಹಲವಾರು ದಿನಗಳಿಂದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ದೂರುಗಳು ಬಂದಿದ್ದವು ಎನ್ನಲಾಗಿದ್ದು, ಪರಿಶೀಲನೆ ಸಂದರ್ಭ ಜಯಪ್ರಕಾಶ್‌ಗೆ ಹೊದಿಗೆರೆಯಲ್ಲಿ 12 ಎಕರೆ ಅಡಿಕೆ ತೋಟ, ದಾವಣಗೆರೆಯ ಆವರಗೆರೆ, ಬಸಾಪುರ, ಜೆ.ಹೆಚ್. ಪಟೇಲ್ ಬಡಾವಣೆಗಳಲ್ಲಿ 10ಕ್ಕೂ ಹೆಚ್ಚು ನಿವೇಶನ, ಕುಂದವಾಡ ರಸ್ತೆಯಲ್ಲಿ 14 ಗುಂಟೆ ಜಮೀನು, ದಾಗಿನಕಟ್ಟೆಯಲ್ಲಿ 22 ಎಕರೆ ಜಮೀನು, ನಾಲ್ಕು ಅಂತಸ್ತಿನ ಮನೆ, ಬೆಂಗಳೂರಿನಲ್ಲಿ ಮೂರು ಅಂತಸ್ತಿನ ಮನೆ ಹಾಗೂ ಕೆಂಗೇರಿಯ ಮೈಲು ಸಂದ್ರದಲ್ಲೂ ಮನೆಗಳಿರುವುದು ಪತ್ತೆಯಾಗಿವೆ. ಕಾರ್ಯಾಚರಣೆ ಸಂಜೆಯೂ ಮುಂದುವರೆದಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News