ಮೇಲಾಧಿಕಾರಿಯ ಕಿರುಕುಳ: ಆತ್ಮಹತ್ಯೆಗೆ ಯತ್ನ

Update: 2017-06-23 16:54 GMT

ದಾವಣಗೆರೆ, ಜೂ. 23: ಮೇಲಾಧಿಕಾರಿಗಳ ಕಿರುಕುಳಕ್ಕೆ ಮನನೊಂದು ಸಣ್ಣ ನೀರಾವರಿ ಇಲಾಖೆಯ ಎಇಇ ಅಧಿಕಾರಿ ಶಿವಕುಮಾರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ನಗರದ ರಾಮನಗರದಲ್ಲಿ ನಡೆದಿದೆ.

ದಾವಣಗೆರೆ ಮೂಲದ ಶಿವಕುಮಾರ್ ಅವರು ರಾಯಚೂರು, ಕೊಪ್ಪಳ ಜಿಲ್ಲೆಗಳ ಪ್ರಭಾರ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ಕು ಪುಟಗಳ ಡೆತ್‌ನೋಟ್:
ಆತ್ಮಹತ್ಯೆ ಯತ್ನಕ್ಕೂ ಮುನ್ನ ಶಿವಕುಮಾರ್ ಸುಮಾರು 4 ಪುಟಗಳ ಡೆತ್‌ನೋಟ್ ಅನ್ನು ಬರೆದಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ 176 ಬಿಲ್‌ಗಳಿಗೆ ಸಹಿ ಹಾಕಿದ್ದೆ. ಅದರ ಮೊತ್ತ 1.76 ಕೋಟಿ ಮಾತ್ರ. ಆದರೆ, ಇದರಲ್ಲಿ 11.65 ಕೋಟಿ ರೂ. ಮೊತ್ತದ ಬೃಹತ್ ಅವ್ಯವಹಾರ ನಡೆದಿದೆ. ಅದರಲ್ಲಿ ಭಾಗಿಯಾಗಿರೋದು ಹಿರಿಯ ಅಧಿಕಾರಿಗಳು. ಆದರೆ ಅಮಾನತು ಶಿಕ್ಷೆ ನಮಗೆ ನೀಡಲಾಗಿದೆ ಎಂದು ಡೆತ್ ನೋಟ್ ಬರೆದಿದ್ದಾರೆ.

ಈ ಪ್ರಕರಣದಲ್ಲಿ ಸಿ.ಇ, ಇಇ, ಶಾಖಾಧಿಕಾರಿ ಮತ್ತಿತರ ಹಿರಿಯ ಅಧಿಕಾರಿಗಳು ನನ್ನ ಸಹಿ ಫೋರ್ಜರಿ ಮಾಡಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿರುವ ಶಿವಕುಮಾರ್, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕೈಗೊಳ್ಳುವಂತೆ ಸಣ್ಣ ನೀರಾವರಿ ಸಚಿವ ಟಿ.ಬಿ. ಜಯಚಂದ್ರಗೆ ಹಾಗೂ ಸಂಬಂಧಿಗಳ ಮನವಿ ಮಾಡಿದ್ದಾರೆ.

ಸಣ್ಣ ನೀರಾವರಿ ಇಲಾಖೆಯಲ್ಲಿ 11.65 ಕೋಟಿ ರು. ಅವ್ಯವಹಾರ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಒಟ್ಟು 24 ಸಿಬ್ಬಂದಿ ಅಮಾನತುಗೊಳಿಸಲಾಗಿತ್ತು. ಅದರಲ್ಲಿ ಶಿವಕುಮಾರ್ ಕೂಡ ಒಬ್ಬರಾಗಿದ್ದರು. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News