ರಮಝಾನ್ ಹಬ್ಬದ ಪ್ರಯುಕ್ತ ನಗರದಲ್ಲಿ ಸುಗಮ ಸಂಚಾರಕ್ಕೆ ಜಿಲ್ಲಾಡಳಿತ ಕ್ರಮ
ಶಿವಮೊಗ್ಗ, ಜೂ.24: ಮುಸ್ಲಿಂ ಸಮುದಾಯದವರು ಆಚರಿಸಲಿರುವ ರಮಝಾನ್ ಹಬ್ಬದ ಅಂಗವಾಗಿ ನಗರದ ಸವಳಂಗ ರಸ್ತೆಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸುವುದರಿಂದ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗದಂತೆ ಜಿಲ್ಲಾಡಳಿತದ ವತಿಯಿಂದ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸವಳಂಗ ರಸ್ತೆಯು ಕಿರಿದಾಗಿದೆ. ಅಲ್ಲದೆ ನಗರದ ಅತಿಸೂಕ್ಷ್ಮ ಪ್ರದೇಶವಾಗಿರುವುದರಿಂದ ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸುವ ಹಿನ್ನೆಲೆಯಲ್ಲಿ ಮೋಟಾರು ವಾಹನ ಕಾಯ್ದೆಯನ್ವಯ ಜೂನ್ 26ರಂದು ಒಂದು ದಿನ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಚಾಲಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವಾಹನಗಳ ಮಾರ್ಗ ಬದಲಾವಣೆಯ ವಿವರ :
ಸಂಗೊಳ್ಳಿ ರಾಯಣ್ಣ ಸರ್ಕಲ್ ಕಡೆಯಿಂದ ಕೆ.ಇ.ಬಿ.ಸರ್ಕಲ್ ಕಡೆಗೆ ಬರುವ ಭಾರೀ ವಾಹನಗಳನ್ನು ಶಂಕರಮಠ ರಸ್ತೆ ಮೂಲಕ ಬಿ.ಹೆಚ್.ರಸ್ತೆ ಮೂಲಕ ಬಸ್ಟ್ಯಾಂಡ್‌ಗೆ ಅಥವಾ ಎಂ.ಆರ್.ಎಸ್.ಕಡೆಗೆ ಹೋಗುವುದು. ಕೆ.ಇ.ಬಿ.ಸರ್ಕಲ್ ಕಡೆಯಿಂದ ಮಹಾವೀರ ಸರ್ಕಲ್ ಕಡೆಗೆ ಹೋಗುವ ವಾಹನಗಳು ಟ್ಯಾಂಕ್ ಮೊಹಲ್ಲ ರಸ್ತೆ ಮೂಲಕ ಬಿ.ಹೆಚ್.ರಸ್ತೆ ಹಾಗೂ ಬಸವನಗುಡಿ ಕಡೆಯಿಂದ ಶಿವಮೂರ್ತಿ ಸರ್ಕಲ್ ಕಡೆಗೆ ಹೋಗುವುದು. ಶಿವಮೂರ್ತಿ ಸರ್ಕಲ್ ಕಡೆಯಿಂದ ಮಹಾವೀರ ಸರ್ಕಲ್ ಕಡೆಗೆ ಹೋಗುವ ಎಲ್ಲಾ ವಾಹನಗಳನ್ನು ಕುವೆಂಪು ರಸ್ತೆ ಮಾರ್ಗದಲ್ಲಿ ಹಾಗೂ ಬಸವನಗುಡಿ ಕಡೆಗೆ ಹೋಗುವುದು. ಗೋಪಿ ಸರ್ಕಲ್ ಕಡೆಯಿಂದ ಮಹಾವೀರ ಸರ್ಕಲ್ ಕಡೆಗೆ ಹೋಗುವ ವಾಹನಗಳು ದುರ್ಗಿಗುಡಿ ರಸ್ತೆ ಮೂಲಕ ಜೈಲ್ ಸರ್ಕಲ್ ತಲುಪಿ ಕುವೆಂಪು ರಸ್ತೆ ಮೂಲಕ ಸಂಚರಿಸುವುದು.
ಜಿಲ್ಲಾ ಪಂಚಾಯತ್ ಕ್ರಾಸ್ ಕಡೆಯಿಂದ ಬರುವ ವಾಹನಗಳು ತಿಲಕ್ ನಗರ ಮೂಲಕ ಪಾರ್ಕ್ ಬಡಾವಣೆ ಮೂಲಕ ಗೋಪಿ ಸರ್ಕಲ್‌ಗೆ ಹೋಗುವುದು. ಡಿ.ವಿ.ಎಸ್.ಸರ್ಕಲ್‌ನಿಂದ ಮಹಾವೀರ ಸರ್ಕಲ್‌ಗೆ ಹೋಗುವ ವಾಹನಗಳು, ವೀರಶೈವ ಕಲ್ಯಾಣ ಮಂದಿರ ಸರ್ಕಲ್ ಮೂಲಕ ಗೋಪಿ ಸರ್ಕಲ್‌ಗೆ ಹೋಗುವುದು ಹಾಗೂ ಡಿ.ವಿ.ಎಸ್. ಕಾಲೇಜ್, ಚರ್ಚ್ ಮೂಲಕ ಬಿ.ಹೆಚ್.ರಸ್ತೆಗೆ ಹೋಗುವುದು. ರಾಘವೇಂದ್ರ ಮಠ ಸರ್ಕಲ್‌ನಿಂದ ಈದ್ಗಾ ಮೈದಾನದ ಕಡೆಗೆ ಬರುವ ವಾಹನಗಳು ರಾಘವೇಂದ್ರ ಮಠದ ರಸ್ತೆಯ ಮೂಲಕ ಕುವೆಂಪು ರಸ್ತೆಗೆ ಸೇರುವುದು ಹಾಗೂ ಜಿಲ್ಲಾ ಕಾಂಗ್ರೇಸ್ ಕಚೇರಿ ಮೂಲಕ ಗೋಪಿ ಸರ್ಕಲ್‌ಗೆ ಹೋಗುವುದು.
ಪ್ರಾರ್ಥನೆಗೆ ಬರುವ ವಾಹನಗಳನ್ನು ಪಾರ್ಕಿಂಗ್ ಮಾಡುವ ಸ್ಥಳಗಳು : ಕುವೆಂಪು ರಂಗಮಂದಿರದಿಂದ ಡಿ.ವಿ.ಎಸ್. ಸರ್ಕಲ್‌ವರೆಗೆ ರಸ್ತೆಯ ಎರಡೂ ಕಡೆಗೆ ದ್ವಿಚಕ್ರವಾಹನಗಳನ್ನು ನಿಲುಗಡೆ ಮಾಡುವುದು. ಕುವೆಂಪು ರಂಗಮಂದಿರದ ಒಳಗಡೆ ನಾಲ್ಕು ಚಕ್ರದ ವಾಹನಗಳನ್ನು ಪಾರ್ಕಿಂಗ್ ಮಾಡುವುದು. ಬಾಲರಾಜ ಅರಸ್ ರಸ್ತೆ ಕಾಂಗ್ರೇಸ್ ಕಚೇರಿ ಕ್ರಾಸ್‌ನಿಂದ ಗೋಪಿ ಸರ್ಕಲ್‌ವರೆಗೆ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುವುದು. ಬಾಲರಾಜ ಅರಸ್ ರಸ್ತೆ ನ್ಯಾಷನಲ್ ಸ್ಕೂಲ್ ಗೇಟ್‌ನಿಂದ ಡಿ.ಸಿ.ಸಾಹೇಬರ ಮನೆ ಕ್ರಾಸ್‌ವರೆಗೆ ದ್ವಿಚಕ್ರವಾಹನಗಳನ್ನು ನಿಲುಗಡೆ ಮಾಡುವುದು. ಶಿವಮೂರ್ತಿ ಸರ್ಕಲ್‌ನಿಂದ ಜಿಲ್ಲಾ ಪಂಚಾಯತ್ ಕ್ರಾಸ್‌ವರೆಗೆ ಕುವೆಂಪು ರಸ್ತೆಯಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವುದು. ಮಿಳ್ಳಘಟ್ಟ ಕ್ರಾಸ್‌ನಿಂದ ಅಶೋಕನಗರ ಕ್ರಾಸ್‌ವರೆಗೆ ಕಬರಸ್ಥಾನದ ಎದುರು ದೊಡ್ಡಪೇಟೆ ಠಾಣೆ ಕಡೆಗೆ ವಾಹನ ಪಾರ್ಕಿಂಗ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.