×
Ad

ಕೇಂದ್ರ ಸಚಿವರ ರೈತ ವಿರೋಧಿ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟಣೆ

Update: 2017-06-24 17:31 IST

ದಾವಣಗೆರೆ, ಜೂ.24: ಕೇಂದ್ರ ಸಚಿವ ವೆಂಕಯ್ಯನಾಯ್ಡು ರೈತ ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿಲಾಯಿತು.ಮಹಾನಗರ ಪಾಲಿಕೆ ಮುಂಭಾಗದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಕೇಂದ್ರ ಸಚಿವ ವೆಂಕಯ್ಯನಾಯ್ಡು ಪ್ರತಿಕೃತಿಯನ್ನು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಸಿಎಂ ರೈತರ ಸಾಲಮನ್ನಾ ಮಾಡಿರುವುದಕ್ಕೆ ಅಭಿನಂದಿಸಿದ ಅವರು, ರೈತರ ಸಾಲಮನ್ನಾವನ್ನು ಇಡೀ ದೇಶವೇ ಸ್ವಾಗತಿಸಿದೆ. ಆದರೆ, ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಪಕ್ಷದ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ರೈತ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರು ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದಾಜ್ಲೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಕಿವಿಹಿಂಡಲಿ ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ರೈತರ ಬಗ್ಗೆ ಕಳಕಳಿ ಇದ್ದರೆ ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಒತ್ತಡ ತಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಪಾಲಿಕೆ ಮೇಯರ್ ಅನಿತಾಬಾಯಿ ಮಾಲತೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ರಾಜ್ಯ ಮಹಿಳಾ ಕಾಂಗ್ರೆಸ್‌ನ ಕಾರ್ಯದರ್ಶಿ ಪುಷ್ಪಾ ಲಕ್ಷ್ಮಣಸ್ವಾಮಿ, ಮಹಿಳಾ ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಪ್ರಶಾಂತ್, ಉಪಮೇಯರ್ ಮಂಜಮ್ಮ ಹನುಮಂತಪ್ಪ, ಎನ್‌ಎಸ್‌ಯುಐನ ಮುಜಾಹಿದ್ ಅಯೂಬ್ ಪೈಲ್ವಾನ್, ಅಜ್ಜಂಪುರ ಮೃತ್ಯುಂಜಯ, ಮಹಾದೇವಮ್ಮ, ದ್ರಾಕ್ಷಾಯಣಮ್ಮ, ಸೇವಾದಳದ ಶಿವಕುಮಾರ್, ಆರೀಫ್, ಎ. ನಾಗರಾಜ್, ಪಾಲಿಕೆ ಸದಸ್ಯ ಬಸಪ್ಪ, ಎಂ. ಹಾಲೇಶ್, ರಾಜಶೇಖರ್ ಗೌಡ್ರು, ಶ್ರೀನಿವಾಸ್, ಗುರುರಾಜ್, ಲಿಂಗರಾಜ್, ಪಿ.ಎನ್. ಚಂದ್ರಶೇಖರ್ ಮತ್ತಿತರರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News